ಮಾತು ಹಾಗೂ ಕೃತಿ ಹತ್ತಿರವಾದರೆ ಸಮಾಜದಲ್ಲಿ ಗೌರವ ಜಾಸ್ತಿ: ಡಾ.ಸಿದ್ದಾರೆಡ್ಡಿ

ಬೀದರ್:ಎ.5: ಮಾತು ಹಾಗೂ ಕೃತಿ ಎರಡು ಹತ್ತಿರವಾದಾಗ ಸಮಾಜದಲ್ಲಿ ಗೌರವ ಹೆಚ್ಚಳವಾಗುತ್ತದೆ ಎಂದು ಡಾ.ಎಸ್.ಎಸ್ ಸಿದ್ದಾರೆಡ್ಡಿ ಫೌಂಡೆಶನ್ ಗೌರವಾಧ್ಯಕ್ಷೆ ಡಾ.ಗುರಮ್ಮ ಸಿದ್ದಾರೆಡ್ಡಿ ನುಡಿದರು.

ಮಂಗಳವಾರ ನಗರದ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕøತಿಕ ಸಭಾಂಗಣದಲ್ಲಿ ಡಾ.ಎಸ್.ಎಸ್ ಸಿದ್ದಾರೆಡ್ಡಿ ಫೌಂಡೆಶನ್ ವತಿಯಿಂದ ವೈದ್ಯ ಸಂತ ಡಾ.ಸಿದ್ದಾರೆಡ್ಡಿಯವರ ಸ್ಮರಣಾರ್ಥ 2022-23ನೇ ಸಾಲಿನ ರಾಜ್ಯ ಪುರಸ್ಕಾರ ಪ್ರಶಸ್ತಿ ಪಡೆದ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಗೆ ಜರುಗಿದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಡಾ.ಸಿದ್ದಾರೆಡ್ಡಿಯವರಿಗೆ ಮಕ್ಕಳೆಂದರೆ ತುಂಬ ಪ್ರೀತಿ. ಭಾರತ ಸ್ಕೌಟ್ಸ್ ಮತ್ತು ಗೈಡ್ ಸಂಸ್ಥೆಯನ್ನು ಬೀದರ್‍ನಲ್ಲಿ ಹುಟ್ಟು ಹಾಕಿ ಸುಮಾರು 25 ವರ್ಷಗಳ ಕಾಲ ಸಂಸ್ಥೆಯ ಮುಖ್ಯ ಆಯುಕ್ತರಾಗಿ ಕಾರ್ಯ ನಿರ್ವಹಿಸಿದರು. ಹಾಗಾಗಿ ಪ್ರತಿ ವರ್ಷ ಅವರ ಸ್ಮರಣಾರ್ಥ ಈ ಮಕ್ಕಳಿಗೆ ಸನ್ಮಾನಿಸುವ ಕಾರ್ಯ ನಡೆಸಲಾಗುತ್ತಿದೆ ಎಂದರು.

2016ರಲ್ಲಿ ಡಾ.ಎಸ್.ಎಸ್ ಸಿದ್ದಾರೆಡ್ಡಿ ಫೌಂಡೆಶನ್ ಸ್ಥಾಪನೆ, 2017ರಲ್ಲಿ ಸಿದ್ದಾರಡ್ಡಿ ದೃಷ್ಟಿ ಆಸ್ಪತ್ರೆ ಉದ್ಘಾಟನೆ, 2018ರಲ್ಲಿ ಚಳಕಾಪೂರ ಸಿದ್ಧಾರೂಢ ಜಾತ್ರೆಯಲ್ಲಿ ಕಣ್ಣಿನ ಉಚಿತ ತಪಾಸಣೆ ಮತ್ತು ಶಸ್ತ್ರ ಚಿಕಿತ್ದೆ ನಡೆಸಲಾಯಿತು. 2019ರಲ್ಲಿ ಥಟ್ ಅಂತ ಹೇಳಿ? ಚಂದನ ವಾಹಿನಿಯಲ್ಲಿ ಗ್ರಾಮೀಣ ಪ್ರತಿಭೆಗೆ ಅವಕಾಶ, 2020ರಲ್ಲಿ ಕೊರೊನಾ ಸಂತ್ರಸ್ತರಿಗೆ ಸಹಾಯ ಹೀಗೆ ಅನೇಕ ರಚನಾತ್ಮಕ ಚಟುವಟಿಕೆಗಳನ್ನು ನಡೆಸಲಾಯಿತೆಂದು ತಿಳಿಸಿದರು.

ಜಿಲ್ಲಾ ಲೇಖಕಿಯರ ಸಂಘ, ಭಾರತ ಸೈಟ್ಸ್ ಮತ್ತು ಗೈಡ್ ಜಿಲ್ಲಾ ಸಂಸ್ಥೆ, ಭಾರತೀಯ ಕುಟುಂಬ ಯೋಜನಾ ಸಂಘ, ಕರ್ನಾಟಕ ಸಾಹಿತ್ಯ ಸಂಘ ಹಾಗೂ ಬ್ರಹ್ಮಕುಮಾರಿ ಸಂಸ್ಥೆಗಳೊಂದಿಗೆ ಮಹಿಳಾ ದಿನಾಚರಣೆ ಆಚರಿಸಲಾಯಿತು. ಪ್ರತಿ ವರ್ಷದಂತೆ ಈ ವರ್ಷವು ಸಹ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳಾದ ಕು.ಭವಾನಿ ರೆಡ್ಡಿ ಹಾಗೂ ಕು.ಗುಣಶ್ರೀ ರವೀಂದ್ರಕುಮಾರ ಅವರಿಗೆ ತಲಾ 25 ಸಾವಿರ ಶಿಷ್ಯವೇತನ ನೀಡಲಾಯಿತು ಎಂದರು.

ಡಾ.ಸಿದ್ದಾರೆಡ್ಡಿಯವರಿಗೆ ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕøತಿ ಮೇಲೆ ತುಂಬ ಅಭಿಮಾನವಿತ್ತು. ಹಾಗಾಗಿ ನೆಲದ ನೆನಪು, ತವನಿಧಿ ಸೇರಿದಂತೆ ಫೌಂಡೆಶನ್ ವತಿಯಿಂದ ಸುಮಾರು 21 ಪುಸ್ತಕಗಳನ್ನು ಹೊರ ತರಲಾಯಿತು ಎಂದು ಡಾ.ಗುರಮ್ಮ ವಿವರಿಸಿದರು.

ಸಾನಿಧ್ಯ ವಹಿಸಿದ ನೌಬಾದ್ ಬ್ರಹ್ಮಾಕುಮಾರಿ ಕೇಂದ್ರದ ಬಿ.ಕೆ ಜ್ಯೋತಿ ಬಹೆನ್‍ಜಿ ಮಾತನಾಡಿ, ವಿಶ್ವದಲ್ಲಿ ಹುಟ್ಟು, ಸಾವು ಒಂದು ಸಹಜ ನಾಟಕ. ಅದರ ಮಧ್ಯದಲ್ಲಿ ಮಾಡುವ ಸಾಧನೆಗೆ ಸನ್ಮಾನವಿರುತ್ತದೆ. ಅಂಥವರ ಯಾದಿಯಲ್ಲಿ ಡಾ.ಸಿದ್ದಾರೆಡ್ಡಿಯವರು ಗುರಿತಿಸಿಕೊಂಡಿದ್ದರು ಎಂದರು.

ಭಾರತೀಯ ಕುಟುಂಬ ಯೋಜನಾ ಸಂಘದ ಕಾರ್ಯಕಾರಿಣಿ ಸದಸ್ಯೆ ಪದ್ಮಜಾ ವಿಶ್ವಕರ್ಮಾ ಮುಖ್ಯ ಅತಿಥಿಗಳಾಗಿ ಮಾತನಾಡಿ, ಡಾ.ಸಿದ್ದಾರೆಡ್ಡಿ ಅವರು ಬಡವರಿಗೆ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ನೀಡುತ್ತಿದ್ದರು. ಭಾರತೀಯ ಕುಟುಂಬ ಯೋಜನೆ ಸಂಘ ಹುಟ್ಟು ಹಾಕಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಡಾ.ಎಸ್.ಎಸ್ ಸಿದ್ದಾರೆಡ್ಡಿ ಫೌಂಡೆಶನ್ ಅಧ್ಯಕ್ಷ ಡಾ.ವಿಕ್ರಮ ಸಿದ್ದಾರೆಡ್ಡಿ ಮಾತನಾಡಿ, ನಮ್ಮ ತಂದೆಯವರಾದ ಡಾ.ಸಿದ್ದಾರೆಡ್ಡಿ ಅವರ ಕನಸ್ಸು ನನಸ್ಸು ಮಾಡುವುದು ನಮ್ಮ ಆದ್ಯ ಕರ್ತವ್ಯ. ಅವರು ಸ್ಕೌಟ್ಸ್ ಮತ್ತು ಗೈಡ್‍ನಲ್ಲಿ ಆಯುಕ್ತರಿದ್ದ ಕಾರಣ ಅವರ ಪ್ರಭಾವ ತನ್ನ ಮೇಲೆ ಬಿದ್ದು ನಾನು ಈ ಸಂಸ್ಥೆಯಿಂದ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಲು ಸಾಧ್ಯವಾಯಿತೆಂದು ತಿಳಿಸಿದರು.

ಶಾಹಿನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಅಬ್ದುಲ್ ಖದೀರ್, ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಡಾ.ಜಗನ್ನಾಥ ಹೆಬ್ಬಾಳೆ, ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಭಾರತಿ ವಸ್ತ್ರದ್, ಕರ್ನಾಟಕ ಜಾನಪದ ಪರಿಷತ್ ತಾಲೂಕಾಧ್ಯಕ್ಷ ಎಸ್.ಬಿ ಕುಚಬಾಳ ಹಾಗೂ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಡಾ.ಹೆಚ್.ಬಿ ಭರಶೆಟ್ಟಿ ಮಾತನಾಡಿದರು. ಫೌಂಡೆಶನ್ ಸಂಚಾಲಕ ಕೆ.ಎಸ್ ಚಳಕಾಪುರೆ ಪ್ರಾಸ್ತಾವಿಕ ಮಾತನಾಡಿದರು.

ಈ ಸಂದರ್ಭದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‍ನಲ್ಲಿ ಫೌಂಡೆಶನ್ ವತಿಯಿಂದ ರಾಜ್ಯ ಪ್ರಶಸ್ತಿ ಪಡೆದ ಸುಮಾರು 100ಕ್ಕೂ ಅಧಿಕ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಆಯುಕ್ತೆ ಲೀಲಾವತಿ ಚಾಕೋತೆ, ಕಿತ್ತೂರು ರಾಣಿ ಚನ್ನಮ್ಮ ಮಹಿಳಾ ಮಂಡಳದ ಕಾರ್ಯದರ್ಶಿ ಪುಣ್ಯವತಿ ವಿಸಾಜಿ, ಡಾ.ಸಿದ್ದಾರೆಡ್ಡಿಯವರ ಕುಟುಂಬಸ್ಥರಾದ ಡಾ.ವೀಣಾ ಸಿದ್ದಾರೆಡ್ಡಿ, ಡಾ.ರಾಜೇಶ್ರೀ ರೆಡ್ಡಿ ಹಾಗೂ ಇತರರು ವೇದಿಕೆಯಲ್ಲಿದ್ದರು.

ಆರಂಭದಲ್ಲಿ ನವರಸ ಕಲಾವಿದ ವೈಜಿನಾಥ ಸಜ್ಜನಶೆಟ್ಟಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಸಂಘಟನಾಯುಕ್ತೆ ನಾಗರತ್ನಾ ಪಾಟೀಲ ಕಾರ್ಯಕ್ರಮ ನಿರೂಪಿಸಿ, ಎಫ್.ಪಿ.ಎ.ಐ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ ವಂದಿಸಿದರು.