ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ 27 :- ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲು ಪ್ರತಿಯೊಬ್ಬ ಅಧಿಕಾರಿಗಳ ಸಹಕಾರ ಅಗತ್ಯವಾಗಿದ್ದು ಮಾದರಿ ಕ್ಷೇತ್ರವನ್ನಾಗಿಸಲು ಎಲ್ಲರೂ ನಮ್ಮ ಜೊತೆ ಕೈಜೋಡಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದ ನೂತನ ಶಾಸಕ ಡಾ ಶ್ರೀನಿವಾಸ ಕರ್ತವ್ಯ ನಿಷ್ಠೆ ತೋರದ ಅಧಿಕಾರಿಗಳಿಗೆ ನನ್ನ ಮಾತು ಕೇಳಲು ಮೃದುವಾಗಿರುತ್ತೆ ಆದರೆ ತೆಗೆದುಕೊಳ್ಳುವ ನಿರ್ಧಾರ ಮಾತ್ರ ಕಠಿಣವಾಗಿರುತ್ತೆ ಎಂದು ಮಾತಿನ ಚಾಟಿ ಬೀಸಿದರು.
ಅವರು ಶುಕ್ರವಾರ ಪಟ್ಟಣದ ಪ್ರವಾಸಿಮಂದಿರದಲ್ಲಿ ಕರೆದ ಕೂಡ್ಲಿಗಿ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳ ಮೊದಲ ಪರಿಚಯದ ಸಭೆಯಲ್ಲಿ ಭಾಗವಹಿಸಿದ ಶಾಸಕರು ಮಾತನಾಡುತ್ತ ಇವರೇನುಶಾಸಕರು ಮೃದು ಮಾತನಾಡುತ್ತಾರೆ ಎಂದು ತಮ್ಮಗಳ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದಲ್ಲಿ ತೆಗೆದುಕೊಳ್ಳುವ ಕಠಿಣ ನಿರ್ಧಾರ ಯಾವ ರೀತಿ ಇರುತ್ತೆ ಎಂದು ಕಾಣುತ್ತಿರಿ ಎಂದು ಖಡಕ್ ವಾರ್ನಿಂಗ್ ನೀಡಿದರು.
ಹಳ್ಳಿಗಳಲ್ಲಿ ಶುದ್ಧ ಕುಡಿವ ನೀರು, ಗ್ರಾಮೀಣ ರಸ್ತೆಗಳು, ಗುಣಮಟ್ಟದ ಶಿಕ್ಷಣ, ಪರಸರ ಕಾಳಜಿ, ಹಳ್ಳಿಗಳಿಗೆ ಬಸ್ ಸೌಕರ್ಯ, ರೈತರಿಗೆ ಬಿತ್ತನೆ ಬೀಜ ಸಮರ್ಪಕ ವಿತರಣೆ ಸೇರಿ ನಾನಾ ಸೌಲಭ್ಯಗಳಿಗೆ ಅಧಿಕಾರಿಗಳು ಹೆಚ್ಚಿನ ಗಮನ ನೀಡಬೇಕು. ಆ ಮೂಲಕ ಅಭಿವೃದ್ಧಿ ಹೊಂದಿದ ತಾಲೂಕಾಗಿ ಮಾಡಲು ಎಲ್ಲರೂ ಸಿದ್ಧರಾಗಬೇಕು
ನೀರು ಶುದ್ಧಿಕರಣ ಘಟಕಗಳಿಗೆ ಬೀಗ ಬಿದ್ದಿವೆ. ಒಂದು ವಾರದೊಳಗೆ ಘಟಕಗಳು ರಿಪೇರಿಯಾಗಿ ಜನರಿಗೆ ಶುದ್ಧ ನೀರು ಸಿಗುವಂತಾಗಬೇಕು ಎಂದು ಶಾಸಕರು ಕೇಳಿದ ಪ್ರಶ್ನೆಗೆ ಕೆಲವು ಘಟಕಗಳು ರಿಪೇರಿ ಇದ್ದು ಅವುಗಳನ್ನು ಸರಿಪಡಿಸಿ ಹೆಚ್ಚಿನ ಒತ್ತು ನೀಡುವುದಾಗಿ ಗ್ರಾಮೀಣ ಕುಡಿವ ನೀರು ಸರಬರಾಜು ಇಲಾಖೆ ಎಇಇ ಬಿ.ಆರ್.ಪ್ರಸನ್ನ ಅವರು ಉತ್ತರಿಸಿದರು.
ಮಳೆಗಾಲ ಆರಂಭವಾಗಿದ್ದು, ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಕೊರತೆಯಾಗದಂತೆ ಗಮನಹರಿಸಲು ಕೃಷಿ ಇಲಾಖೆ ಅಧಿಕಾರಿಗೆ ಸೂಚಿಸಿದರು. ಈಗಾಗಲೇ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ, ಗೊಬ್ಬರ ದಾಸ್ತಾನು ಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದರು ಬೀಜ ಗೊಬ್ಬರ ದಾಸ್ತಾನು ಇದ್ದು ರೈತರಿಗೆ ವಿತರಿಸುವ ಬಗ್ಗೆ ಹಾಗೂ ಬೀಜ ಗೊಬ್ಬರ ಇತರೆ ಕೃಷಿ ಸಾಮಗ್ರಿಗಳ ರಿಯಾಯಿತಿ ದರದ ಬಗ್ಗೆ ಕೃಷಿ ಅಧಿಕಾರಿ ಸುನೀಲಕುಮಾರ ತಿಳಿಸಿದರು.
ಪಟ್ಟಣದ ತಾಲೂಕು ಕೆಂದ್ರದ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಅನಸ್ತೇಷಿಯಾ ತಜ್ಞ ವೈದ್ಯರ ಕೊರತೆ ಇರುವ ಬಗ್ಗೆ ಟಿಎಚ್ ಒ ಡಾ.ಪ್ರದೀಪ್ ಕುಮಾರ್ ಹಾಗೂ ವೈದ್ಯಾಧಿಕಾರಿ ಡಾ.ವಿನಯ್ ಕುಮಾರ್ ತಿಳಿಸಿದರು. ಈ ಬಗ್ಗೆ ನಮ್ಮ ತಾಲೂಕಿನ ಆರೋಗ್ಯ ಕ್ಷೇತ್ರದ ಬಗ್ಗೆ ನಾನು ಒಬ್ಬ ವೈದ್ಯನಾಗಿರುವುದರಿಂದ ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದು, ವೈದ್ಯರ ಕೊರತೆ ನೀಗಿಸಲು ಪ್ರಯತ್ನಿಸುವೆ ಎಂದು ಡಾ.ಎನ್.ಟಿ.ಶ್ರೀನಿವಾಸ್ ಅವರು ತಿಳಿಸಿದರು.
ಅರಣ್ಯ ಇಲಾಖೆಯಿಂದ ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸುವ ಸಸಿಗಳ ಬೆಲೆ ಇಲಾಖೆಯಿಂದ ಜಾಸ್ತಿ ಮಾಡಿರುವ ಹಿನ್ನೆಲೆ ಸಸಿಗಳು ಮಾರಾಟವಾಗುತ್ತಿಲ್ಲ. ಮೇ 30 ರವರೆಗೆ ಮಾತ್ರ ಸಸಿಗಳ ಮೆಂಟೇನೆನ್ಸ್ ಮಾಡಬಹುದು ಎಂದು ವಲಯ ಅರಣ್ಯಾಧಿಕಾರಿಗಳಾದ ಗುಡೇಕೋಟೆ ರೇಣುಕಮ್ಮ, ಕೂಡ್ಲಿಗಿ ಮಂಜುನಾಥ ತಿಳಿಸಿದರು. ಈ ಕುರಿತು ಸರಕಾರದೊಂದಿಗೆ ಚರ್ಚಿಸಿ ರೈತರಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ಕಳೆದ ವರ್ಷದ ದರವನ್ನು ನಿಗದಿಪಡಿಸಲು ಕೋರಿಕೊಂಡು ಸರಿಪಡಿಸುವುದಾಗಿ ಎಂದು ಶಾಸಕರು ತಿಳಿಸಿದರು.
ರಸ್ತೆಯಲ್ಲಿನ ಅವೈಜ್ಞಾನಿಕ ಹಂಪ್ಸ್ ತೆರವು, ತಾಲೂಕಿನ ಗಡಿ ಭಾಗದ ಹುಡೇಂ, ಪೂಜಾರಹಳ್ಳಿ, ಕಾತ್ರಿಕೆಹಟ್ಟಿ, ಅರ್ಜುನ ಚಿನ್ನೇನಹಳ್ಳಿ ಸೇರಿ ನಾನಾ ಹಳ್ಳಿಗಳಿಗೆ ಸಾರಿಗೆ ಬಸ್ಸುಗಳ ಸಂಚಾರಕ್ಕೆ ಕ್ರಮ, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ, ಯುವಕರಿಗೆ ಸ್ವ ಉದ್ಯೋಗಕ್ಜೆ ಒತ್ತು ಸೇರಿ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಮಾದರಿ ತಾಲೂಕು ಮಾಡಲು ಎಲ್ಲಾ ಅಧಿಕಾರಿಗಳ ಸಹಕಾರ ಮುಖ್ಯ ಎಂದು ನೂತನ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.
ಭ್ರಷ್ಟಾಚಾರಮುಕ್ತ ಆಡಳಿತ ನಮ್ಮ ತಾಲೂಕಿನಲ್ಲಿ ನಡೆಯಬೇಕು ಎಂಬುದು ಕಡ್ಡಾಯ ಎಂದರಲ್ಲದೆ, ಸರಕಾರಿ ಇಲಾಖೆಗಳ ಕೆಲಸದ ಒತ್ತಡಗಳಲ್ಲಿ ಆರೋಗ್ಯವನ್ನು ನಿರ್ಲಕ್ಷಿಸಬೇಡಿ ಎಂದು ತಾನೊಬ್ಬ ವೈದ್ಯನಾಗಿ ಅಧಿಕಾರಿಗಳಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.
ಈ ಸಂದರ್ಭದಲ್ಲಿ ಕೂಡ್ಲಿಗಿ ಪ್ರಭಾರ ತಹಸೀಲ್ದಾರ್ ಕಾರ್ತಿಕ್ , ತಾಪಂ ಇಒ ವೈ.ರವಿಕುಮಾರ್, ಡಿವೈಎಸ್ ಪಿ ಮಲ್ಲೇಶಪ್ಪ ಮಲ್ಲಾಪುರ,
ಕೊಟ್ಟೂರು ತಹಸೀಲ್ದಾರ್ ಕುಮಾರಸ್ವಾಮಿ, ತಾಪಂ ಇಒ ಪರಮೇಶ್ವರ್, ಈ ಸಂದರ್ಭದಲ್ಲಿ ಪಿಡಬ್ಯುಡಿ ಎಎಇ ಸುದರ್ಶನರೆಡ್ಡಿ, ಜಿಪಂ ಎಂಜಿನಿಯರಿಂಗ್ ಎಇಇ ಮಲ್ಲಿಕಾರ್ಜುನ, ಗುಡೇಕೋಟೆ ವಲಯ ಅರಣ್ಯಾಧಿಕಾರಿ ಎ.ರೇಣುಕಮ್ಮ ಸಿಪಿಐ ವಸಂತ ವಿ.ಅಸೋದೆ ಪಿಎಸ್ಐ ಧನುಂಜಯ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ನನ್ನ ಹೆಸರು ದುರ್ಭಳಕೆಗೆ ಒಪ್ಪಲ್ಲ
ಕೂಡ್ಲಿಗಿ ಕ್ಷೇತ್ರದಲ್ಲಿ ಅಧಿಕಾರಿಗಳ ಬಳಿಗೆ ಬಂದು ಶಾಸಕರ ಹಿಂಬಾಲಕರು, ಸಂಬಂಧಿಕರು, ಪಿಎಗಳು ಅಂತ ಯಾರಾದರೂ ಹೇಳಿ ಹಣಕ್ಕಾಗಿ ನನ್ನ ಹೆಸರನ್ನು ದುರ್ಭಳಕೆ ಮಾಡಿ ಬ್ಲಾಕ್ ಮೇಲ್ ಮಾಡಿದರೆ ನಾನು ಸಹಿಸುವುದಿಲ್ಲ. ಅದಕ್ಕೆ ಆಸ್ಪದವೇ ಕೊಡಲ್ಲ. ಅಧಿಕಾರಿಗಳು ಈ ಬಗ್ಗೆ ನನಗೆ ತಿಳಿಸಲು ಹಿಂಜರಿಯಬಾರದು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅಧಿಕಾರಿಗಳ ಗಮನಕ್ಕೆ ತಂದರು ಅಲ್ಲದೆ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಎಲ್ಲರೂ ಸಾಗಬೇಕು ದುಶ್ಚಟಕ್ಕೆ ನಾನು ಎಂದು ಆಸ್ಪದ ನೀಡಲಾರೆ ಎಂದು ಖಡಕ್ಕಾಗಿ ಸಭೆಯಲ್ಲಿ ತಿಳಿಸಿದರು.