ಮಾತು ತಪ್ಪಿದ ಬಿಎಸ್‌ವೈ ಹಳ್ಳಿಹಕ್ಕಿ ಆಕ್ರೋಶ

ಮೈಸೂರು,ಜ.೧೩- ರಾಜ್ಯದಲ್ಲಿ ೧೭ ಮಂದಿ ಶಾಸಕರ ಭಿಕ್ಷೆಯಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದರೆ, ನಮ್ಮ ತ್ಯಾಗಕ್ಕೆ ಬೆಲೆ ಇಲ್ಲದಂತಾಗಿದೆ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ನಾಲಿಗೆಯನ್ನು ಕಳೆದುಕೊಂಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಸಂಜೆ ೭ ಮಂದಿ ಸಚಿವರು ಸಂಪುಟಕ್ಕೆ ಸೇರ್ಪಡೆಯಾಗುತ್ತಿರುವ ಹೆಸರುಗಳನ್ನು ಮುಖ್ಯಮಂತ್ರಿಗಳು ಅಂತಿಮಗೊಳಿಸಿದ್ದಾರೆ. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಹೆಚ್. ವಿಶ್ವನಾಥ್‌ಗ ಅವಕಾಶ ಕಲ್ಪಿಸಲಾಗಿಲ್ಲ. ಇದು ಸಹಜವಾಗಿಯೇ ಅವರನ್ನು ಕೆರಳಿಸಿದೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಬ್ಯಾಗ್ ಹಿಡಿಯುವುದೇ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಇರುವ ಅರ್ಹತೆ ಎಂಬಂತಾಗಿದೆ ಎಂದು ಕಿಡಿಕಾರಿದ್ದಾರೆ.
ಮುಖ್ಯಮಂತ್ರಿಗಳ ಮನೆಯಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದ್ದು, ಸಿ.ಪಿ. ಯೋಗೇಶ್ವರ್ ಮಂತ್ರಿಯಾಗಲು ವಿಜಯೇಂದ್ರ ಕಾರಣ. ಯಡಿಯೂರಪ್ಪನವರ ಪ್ರತಿಷ್ಠೆ ನೆಲಸಮವಾಗಲು ಅವರ ಪುತ್ರ ವಿಜಯೇಂದ್ರ ಕಾರಣರಾಗುತ್ತಾರೆ. ಇಡೀ ವಿಧಾನಸೌಧದಲ್ಲೇ ಅಣ್ಣ-ತಮ್ಮಂದಿರೇ ಕುಳಿತಿದ್ದಾರೆ. ಇದರಿಂದ ಯಡಿಯೂರಪ್ಪ ಸಂಪಾದಿಸಿರುವ ಹೆಸರು ಹಾಳಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಯೋಗೇಶ್ವರ್ ಅವರು ಬ್ಲ್ಯಾಕ್‌ಮೇಲ್ ತಂತ್ರ ಅನುಸರಿಸಿ ಮಂತ್ರಿಯಾಗುತ್ತಿದ್ದಾರೆ. ಮುಂದೊಂದು ದಿನ ಬ್ಲ್ಯಾಕ್‌ಮೇಲ್ ಏನೆಂಬುದು ಹೊರಗೆ ಬರುತ್ತದೆ. ಯೋಗೇಶ್ವರ್ ಬ್ಯಾಗ್ ಹಿಡಿದಿದ್ದನು ಬಿಟ್ಟರೆ ಮತ್ತೇನು ಮಾಡಿಲ್ಲ. ಈ ಎಲ್ಲ ಬೆಳವಣಿಗೆಯಿಂದ ನಮಗೆ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಯಾವ ನಾಯಕನಿಗೂ ಕೃತಜತೆ ಇಲ್ಲ. ಸಿದ್ದರಾಮಯ್ಯ ಅವರನ್ನು ಪಕ್ಷಕ್ಕೆ ಕರೆದುಕೊಂಡು ಬಂದೆವು. ಅವರು ಕೃತಜ್ಞತೆ ಉಳಿಸಿಕೊಳ್ಳಲಿಲ್ಲ. ಯಡಿಯೂರಪ್ಪನವರಿಗಾಗಿ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದೆವು. ಅವರೂ ಕೂಡ ತಮ್ಮ ನಾಲಿಗೆಂiನ್ನು ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಯಾರಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ನೆನಪಿಸಿಕೊಳ್ಳಲಿ ಎಂದು ಹೇಳಿದರು.
೩೩ ಸಚಿವರಲ್ಲಿ ವೀರಶೈವ ಸಮುದಾಯದ ೧೩ ಮಂದಿಗೆ ಅವಕಾಶ ಕಲ್ಪಿಸಲಾಗಿದೆ. ಒಕ್ಕಲಿಗರಿಗೆ ೧೧ ಹಾಗೂ ಕುರುಬ ಜನಾಂಗಕ್ಕೆ ಕೇವಲ ೪ ಜನಕ್ಕೆ ಮಾತ್ರ ಮಂತ್ರಿಸ್ಥಾನ ನೀಡಲಾಗಿದೆ. ಇದೇ ನಿಮ್ಮ ಸಾಮಾಜಿಕ ನ್ಯಾಯ ಎಂದು ಯಡಿಯೂರಪ್ ವಿರುದ್ಧ ಹರಿಹಾಯ್ದಿದ್ದಾರೆ.
ಸಂಪುಟದಿಂದ ನಾಗೇಶ್ ಅವರನ್ನು ಕೈಬಿಟ್ಟಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ಮುನಿರತ್ನ ಬದಲಿಗೆ ಯೋಗೇಶ್ವರ್‌ಗೆ ಸಚಿವ ಸ್ಥಾನ ಏಕೆ ನೀಡುತ್ತಿದ್ದೀರಾ. ಯೋಗೇಶ್ ಮೇಲೆ ವಂಚನೆ ಪ್ರಕರಣವಿದ್ದರೂ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತಿರುವುದು ಏಕೆ ಎಂದು ಹಳ್ಳಿಹಕ್ಕಿ ಪ್ರಶ್ನಿಸಿದ್ದಾರೆ.
ಯಡಿಯೂರಪ್ಪನವರಿಗೆ ಮಾತಿಗೆ ತಪ್ಪದ ನಾಯಕ ಎಂಬ ಬಿರುದು ಕೊಟ್ಟಿದ್ದೆವು. ಅದು ಈಗ ಸುಳ್ಳಾಗಿದೆ ಎಂದು ಕಿಡಿಕಾರಿದ್ದಾರೆ.