ಮಾತು ತಪ್ಪಿದ ಬಿಎಸ್‌ವೈ ವಿಶ್ವ ವಾಗ್ದಾಳಿ

ರಾಯಚೂರು, ಜ. ೧೪- ಸನ್ ಸ್ಟ್ರೋಕ್ ಹಾಗೂ ಫ್ಯಾಮಿಲಿ ಸ್ಟ್ರೋಕ್‌ನಿಂದ ಬಿಜೆಪಿ ಹಾಳಾಗುವ ಕಾಲ ದೂರವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ಕಿಡಿಕಾರಿದ್ದಾರೆ.
ಸನ್ ಸ್ಟ್ರೋಕ್‌ನಿಂದ ಜನತಾ ಪರಿವಾರ ಮುಳುಗಿ ಹೋಯಿತು. ಕಾಂಗ್ರೆಸ್ ಕೂಡ ಹಾಳಾಯಿತು. ಈಗ ಬಿಜೆಪಿ ಸರದಿ ಎಂದು ಯಡಿಯೂರಪ್ಪ ಅವರನ್ನು ಗುರಿಯಾಗಿಸಿಕೊಂಡು ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಯಾರ ಮುಲಾಜು ಹಾಗೂ ಭಿಕ್ಷೆಯಿಂದ ಸಿಎಂ ಆಗಿದ್ದಾರೆ ಎಂಬುದನ್ನು ಯಡಿಯೂರಪ್ಪ ಯೋಚಿಸಬೇಕು. ಕೊಟ್ಟ ಮಾತು ಮರೆತ ಬಿಎಸ್‌ವೈ ಅವರನ್ನು ದೇವರು ಕ್ಷಮಿಸುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ದೂರಿದರು.
ಸಂಪುಟ ರಚನೆ ಸಿ.ಎಂ. ಪರಮಾಧಿಕಾರ ಎಂಬುದನ್ನು ನಾನು ಒಪ್ಪುವೆ. ಸಂಪುಟ ರಚನೆ, ವಿಸ್ತರಣೆ ಸಂದರ್ಭದಲ್ಲಿ ಒತ್ತಡ ಬರುವುದು ಸಹಜ. ಆದರೆ ಭ್ರಷ್ಟರನ್ನು ಮಂತ್ರಿ ಮಾಡಿ ಎಂದು ಹೇಳುವುದಿಲ್ಲ. ದಲ್ಲಾಳಿಗಳನ್ನು ಸಚಿವರನ್ನಾಗಿ ಮಾಡಲಾಗಿದೆ ಎಂದು ಹರಿಹಾಯ್ದರು.
ಯೋಗೀಶ್ವರ ವಿರುದ್ಧ ಭ್ರಷ್ಟಾಚಾರದ ಆರೋಪಗಳಿವೆ. ಜನರಿಗೆ ವಂಚಿಸಿರುವ ಕೇಸ್‌ಗಳಿವೆ. ಕೋರ್ಟ್ ಕೂಡ ತನಿಖೆಗೆ ಆದೇಶಿಸಿದೆ. ಸಾವಿರಾರು ಮಂದಿಗೆ ಟೋಪಿ ಹಾಕಿದವನ ಮಂತ್ರಿ ಮಾಡಲಾಗಿದೆ ಎಂದು ದೂರಿದರು.
ಯಡಿಯೂರಪ್ಪನವರ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದೆವು. ಬಿಎಸ್‌ವೈರವರಿಗೆ ಒಳ್ಳೆಯದಾಗಲಿ ಎಂದು ೧೭ ಜನ ಕ್ಷಿಪ್ರ ಕ್ರಾಂತಿಗೆ ಬಂದಿದ್ದೇವು. ಆದರೆ ಸಂಪುಟದಿಂದ ದಲಿತ ನಾಗೇಶ್ ರನ್ನು ಕಿತ್ತು ಹಾಕಿದ್ದಿರಾ, ಹಿಂದುಳಿದ ವರ್ಗದ ಮುನಿರತ್ನನಿಗೆ ಅವಕಾಶ ನೀಡಿಲ್ಲ ಎಂದು ಸಿಎಂ ಬಿಎಸ್ ವೈ ವಿರುದ್ಧ ಆಕ್ರೋಶ ಹೊರಹಾಕಿದರು.
ಶೀಘ್ರದಲ್ಲಿಯೇ ಸಿಡಿ ಬ್ಲಾಸ್ಟ್: ಈ ಬಾರಿ ಸಂಕ್ರಮಣಕ್ಕೆ ಹೋರಿ ಹಿಡಿದಾಗೆ ಹಿಡಿಯಲಾಗುತ್ತದೆ. ಸಿಡಿ ಶೀಘ್ರವೇ ಬಿಡುಗಡೆಯಾಗಲಿದೆ. ಅದನ್ನು ಯತ್ನಾಳ್ ಅಥವಾ ಯಾರೋ ಒಬ್ಬರು ಬಿಡುಗಡೆ ಮಾಡುತ್ತಾರೆ. ಈಗಲೂ ಯಡಿಯೂರಪ್ಪರವರ ಬಗ್ಗೆ ಅಭಿಮಾನವಿದೆ. ಆದರೆ, ಅವರು ಕುಟುಂಬ ರಾಜಕಾರಣಕ್ಕೆ ಬಲಿಯಾಗುತ್ತಿದ್ದಾರಲ್ಲಾ ಎಂದು ಬೇಸರವಾಗುತ್ತಿದೆ. ಹಾಗಾಗಿ ಇಂದು ನಾಲಿಗೆ ಇಲ್ಲದ ನಾಯಕರೂ ಆಗಿದ್ದಾರೆ. ಅವರು ಕರೆದು ಮಾತನಾಡಿದರೆ ಮಾತನಾಡುತ್ತೇವೆ, ನಾವು ಸದ್ಯ ಪರಿಸ್ಥಿತಿಯಲ್ಲಿ ಶಿಶುಗಳಂತಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾರಾ ಮಹೇಶ್ ಕೊಚ್ಚೆಗುಂಡಿ: ಅಂದು ಕುಮಾರಸ್ವಾಮಿ, ಸಿದ್ದರಾಮಯ್ಯ ಸರಿಯಾಗಿದ್ದರೆ ಇಂದು ಇದೆಲ್ಲಾ ಆಗುತ್ತಿರಲಿಲ್ಲ ಎಂದರು. ಇನ್ನೂ ಸಾರಾ ಮಹೇಶ್ ಕೊಚ್ಚೆಗುಂಡಿ. ಅವನ ಬಗ್ಗೆ ಯಾವುದೇ ಮಾತನಾಡುವುದಿಲ್ಲ. ನನ್ನನ್ನು ನಮ್ಮವರು ನಡುನೀರಲ್ಲಿ ಬಿಟ್ಟಿಲ್ಲ, ಇಲ್ಲಿ ಯಾವ ನೀರೇ ಇಲ್ಲಾ. ನಾನೇನಾದರೂ ಅಸಂಬದ್ಧವಾಗಿ ಮಾತನಾಡಿದರೆ ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳಲಿ ಎಂದು ವಾಗ್ದಾಳಿ ತಿಳಿಸಿದರು.