ಮಾತು ತಪ್ಪಿದ ಕೇಂದ್ರ : ಲಾಡ್ ಕಿಡಿ

ಹುಬ್ಬಳ್ಳಿ, ಜೂ 19: ರಾಜ್ಯಕ್ಕೆ ಅಕ್ಕಿ ಖರೀದಿ ಬಗ್ಗೆ ಮಾತು ಕೊಟ್ಟಿದ್ದ ಕೇಂದ್ರ ಸರ್ಕಾರ ಈಗ ಮಾತು ತಪ್ಪಿದೆ. ರಾಜ್ಯದ ಗ್ಯಾರಂಟಿ ಕಾರ್ಯಕ್ರಮ ಯಶಸ್ವಿ ಆಗಬಾರದು ಎಂದು ಈಗ ಕೊಟ್ಟ ಮಾತನ್ನು ಹಿಂಪಡೆದಿದೆ ಎಂದು ಸಚಿವ ಸಂತೋಷ್ ಲಾಡ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮಾತು ತಪ್ಪಿದ್ದು, ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಈಗ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಗೆ ಮುಂದಾಗಿದ್ದಾರೆ. ನಾವು ಜನತೆಗೆ ನೀಡಿದ ಸಮಯದಲ್ಲಿಯೇ ಉಚಿತ ಅಕ್ಕಿ ನೀಡುವ ಭರವಸೆಯನ್ನು ಈಡೇರಿಸುತ್ತೇವೆ ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರವನ್ನು ಕೇಳಿ ಗ್ಯಾರಂಟಿ ನೀಡಲಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಳೆದ ಬಾರಿ ಬಿಜೆಪಿ ಪ್ರಣಾಳಿಕೆಯನ್ನು ಕೇಂದ್ರಕ್ಕೆ ಕೇಳಿ ಕೊಟ್ಟದ್ದರಾ ಎಂದು ಸಿಡಿಮಿಡಿಗೊಂಡ ಅವರು, ಪ್ರಣಾಳಿಕೆ ಕೊಡುವುದು ರಾಜ್ಯಕ್ಕೆ ಸಂಬಂಧಪಟ್ಟ ವಿಷಯ. ಕೇಂದ್ರದವರು ಕೊಟ್ಟ ಮಾತನ್ನು ಹಿಂದಕ್ಕೆ ಪಡೆದ ಉದ್ದೇಶ ಏನು..? ನಾವು ಘೋಷಿಸಿದ ಕಾರ್ಯಕ್ರಮ ಆಗಬಾರದು ಎಂಬ ಉದ್ದೇಶ ಅವರಿಗೆ ಇದೆ ಎಂದ ಅವರು, ಇದೆಲ್ಲವನ್ನೂ ರಾಜ್ಯವಷ್ಟೇ ಅಲ್ಲ ಇಡೀ ದೇಶದ ಜನತೆ ನೋಡುತ್ತಿದೆ. ಈ ವಿಚಾರವಾಗಿ ನಾಳೆ ಮುಖಂಡರೆಲ್ಲ ಸೇರಿ ಪ್ರತಿಭಟಿಸುವುದಾಗಿ ಹೇಳಿದರು.

ಈಗಾಗಲೇ ಜಾರಿಗೊಂಡ `ಶಕ್ತಿ’ ಯೋಜನೆ ಬಿಟ್ಟು ಇನ್ನುಳಿದ ನಾಲ್ಕು ಯೋಜನೆಗಳ ಜಾರಿಯಲ್ಲಿ ಯಾವುದೇ ಗೊಂದಲಗಳಿಲ್ಲ. ಇವೆಲ್ಲವನ್ನೂ ಅನುಷ್ಠಾನಕ್ಕೆ ತರಲು ಸಮಯ ನಿಗದಿ ಮಾಡಲಾಗಿದೆ ಎಂದರು.

ಕೈಗಾರಿಕೋದ್ಯಮಗಳ ವಿದ್ಯುತ್ ಬಿಲ್ ಹೆಚ್ಚಳಕ್ಕೆ ಬಂದ್ ಕರೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮುಂದಿನ ದಿನಗಳಲ್ಲಿ ಸರ್ಕಾರ ಈ ಬಗ್ಗೆ ಚರ್ಚೆ ಮಾಡುತ್ತದೆ ಎಂದು ಅವರು ಹೇಳಿದರು.