ಮಾತುಗಳು ಸಫಲತೆಯ ಪ್ರತೀಕವಾಗಬೇಕು:ಜೇರಟಗಿ ಶ್ರೀಗಳು

ಕೆಂಭಾವಿ :ಎ.15: ನಾವು ಆಡುವ ಮಾತುಗಳು ಕ್ರಿಯಾತ್ಮಕವಾಗಿ ಮತ್ತೊಬ್ಬರಿಗೆ ಉಪಯೋಗವಾದಾಗ ಮಾತ್ರ ಅಂಥಾ ಸತ್ಯದ ನುಡಿಗಳಿಗೆ ಮಹತ್ವ ಬರುತ್ತದೆ ಎಂದು ಜೇರಟಗಿಯ ಶ್ರೀ ಮಹಾಂತ ಸ್ವಾಮಿಗಳು ಹೇಳಿದರು.
ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಶುಕ್ರವಾರ ನಗನೂರ ಗ್ರಾಮದ ಶ್ರೀ ಶರಣಬಸವೇಶ್ವರ ದಾಸೋಹ ಮಠದಲ್ಲಿ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಶ್ರೀಗಳು, ನುಡಿದರೆ ಮುತ್ತಿನ ಹಾರದಂತೆ ಇರಬೇಕು ಎಂಬ ಶರಣರ ವಚನದಂತೆ ನಮ್ಮ ಪ್ರತಿಯೊಂದು ಮಾತುಗಳು ಮತ್ತೊಬ್ಬರ ಮನಸ್ಸಿಗೆ ನೋವು ತರದೆ ಮಾತು ಸಫಲತೆಯ ಪ್ರತೀಕವಾಗಿರಬೇಕು ಎಂದು ಹೇಳಿದರು. ಭಕ್ತರ ಮುಖ ದರ್ಪಣದಲ್ಲಿ ಲಿಂಗವನ್ನು ಕಾಣು ಎಂದು ನಮ್ಮ ಶರಣ ಸಂಸ್ಕøತಿ ಹೇಳಿದಂತೆ ಇಂದು ಇಲ್ಲಿ ನೆರೆದ ಅಪಾರ ಸಂಖ್ಯೆ ಭಕ್ತಗಣ ನೋಡಿದರೆ ನಗನೂರ ಮಠದ ಮೇಲಿನ ಭಕ್ತಿ, ಶ್ರದ್ಧೆ ಸಾಗರದಷ್ಟಿದೆ ಎಂದು ತಿಳಿಯುತ್ತದೆ ಎಂದು ಹೇಳಿದರು. ಕಡಗಂಚಿಯ ಶ್ರೀ ವೀರಭದ್ರ ಶಿವಾಚಾರ್ಯರು ಮಾತನಾಡಿ, ಪುರಾತನ ಇತಿಹಾಸವುಳ್ಳ ನಗನೂರ ಶರಣರ ಮಠ ಧಾರ್ಮಿಕ ಬೀಜ ಬಿತ್ತುವ ಕೇಂದ್ರವಾಗಿದೆ. ಶ್ರೀ ಶರಣರಪ್ಪ ಶರಣರ ಇಂಥಾ ಸಾಮಾಜಿಕ ಕಾರ್ಯ ಮತ್ತೊಬ್ಬರಿಗೆ ಮಾದರಿಯಾಗಿದೆ ಎಂದು ಬಣ್ಣಿಸಿದರು. ಗದುಗಿನ ಪಂ. ಕಲ್ಲಿನಾಥ ಶಾಸ್ತ್ರಿಗಳು ಪ್ರಾಸ್ತಾವಿಕ ಮಾತನಾಡಿದರು. ನಂತರ 35 ನೂತನ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಪೀಠಾಧಿಪತಿ ಶ್ರೀ ಶರಣಪ್ಪ ಶರಣರು ನೇತೃತ್ವ ವಹಿಸಿದ್ದರು, ಶ್ರೀ ಮರುಳಾರಾಧ್ಯ ಶಿವಾಚಾರ್ಯರು, ಶ್ರೀ ಸೂಗೂರೇಶ್ವರ ಶಿವಾಚಾರ್ಯರು, ಶ್ರೀ ಬಸವಯ್ಯ ಸ್ವಾಮಿಗಳು, ಶ್ರೀ ಖಂಡಪ್ಪ ತಾತಾ, ಶ್ರೀ ದೊಡ್ಡಪ್ಪ ತಾತಾ ಸೇರಿದಂತೆ ನಗನೂರ, ಖಾನಾಪೂರ ಗ್ರಾಮದ ಅಸಂಖ್ಯಾತ ಭಕ್ತರು ಇದ್ದರು. ಅಮರಯ್ಯಸ್ವಾಮಿ ಜಾಲಿಬಂಚಿ ನಿರೂಪಿಸಿದರು, ಶ್ರೀಮಂತ ತಿಪ್ಪಶೆಟ್ಟಿ ಸ್ವಾಗತಿಸಿದರು, ಶ್ರೀ ಜಗದೀಶ ಶರಣರು ವಂದಿಸಿದರು. ಬಸವರಾಜ ಭಂಟನೂರ ಮತ್ತು ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನೆರವೇರಿತು.