ಮಾತನಾಡುವಾಗ ಸಿಎಂ ಯೋಚಿಸಿ ಮಾತನಾಡಲಿ

ಸಂಜೆವಾಣಿ ನ್ಯೂಸ್
ಮೈಸೂರು.ಜೂ.05:- ಮಂಡ್ಯದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಸೋಲು ಸೂರ್ಯ ಚಂದ್ರ ಇರುವುದಷ್ಟೇ ಸತ್ಯ ಎಂದು ಹೇಳಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕುಮಾರಸ್ವಾಮಿ ಗೆಲುವಿನಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವರೇ? ಸಿಎಂ ಸಿದ್ದರಾಮಯ್ಯ ಅನುಭವಿ, ಹಿರಿಯರಿದ್ದು ಯೋಚಿಸಿ ಮಾತನಾಡಲಿ ಎಂದು ಶಾಸಕ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಹೇಳಿದರು.
ನಗರದ ಮಹರಾಣಿ ಕಾಲೇಜು ಆವರಣದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಗೆಲುವಿನ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಜೊತೆಗೆ ಆಗಮಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು. ಸಿದ್ಧರಾಮಯ್ಯ ಅವರು ಕಾವಲು ಸಮಿತಿ ಅಧ್ಯಕ್ಷರಾಗಿ, ಹಲವು ಸ್ಥಾನಗಳನ್ನು ಪಡೆದು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ಇಂತಹ ಹಿರಿಯ ರಾಜಕೀಯ ಮುತ್ಸದ್ದಿ ಕುಮಾರಸ್ವಾಮಿ ಅವರ ಕುರಿತು ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೊ ಕುಮಾರಸ್ವಾಮಿ ಸೋಲು ಅಷ್ಟೇ ಖಚಿತ ಎಂದಿದ್ದು ಶೋಭೆ ತರುವುದಿಲ್ಲ. ಈಗ ಕುಮಾರಸ್ವಾಮಿ ಗೆದ್ದಿದ್ದಾರೆ ಇವರು ರಾಜೀನಾಮೆ ಕೊಡುತ್ತಾರ ಎಂದು ಪ್ರಶ್ನಿಸಿದರು.
ಯದುವೀರ್ ಗೆಲವು ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಗಟ್ಟಿತನವನ್ನು ತೋರಿಸಿದೆ. ಕಾಂಗ್ರೆಸ್ ಪಕ್ಷದ ಸೋಲನ್ನು ಸಿದ್ಧರಾಮಯ್ಯ ಸೋಲು ಎನ್ನುವುದಿಲ್ಲ. ನಮ್ಮ ಒಗ್ಗಟ್ಟಿನ ಗೆಲುವು ಎಂದರು.
ಕಾಂಗ್ರೆಸ್ ಪಕ್ಷ ಸುಳ್ಳು ಆಶ್ವಾಸನೆಗಳನ್ನು ನೀಡಿ ಗ್ಯಾರಂಟಿ ಯೋಜನೆಯನ್ನು ನೀಡಿತ್ತು. ಎರಡು ಮೂರು ತಿಂಗಳುಗಳಿಂದ ಹಣ ಹಾಕದೆ ಚುನಾವಣೆ ಸಮಯದಲ್ಲಿ ಹಣ ಹಾಕಿ ಗೆಲ್ಲಲು ಪ್ರಯತ್ನ ಪಟ್ಟರು. ಆದರೆ ಅವರ ಗ್ಯಾರಂಟಿ ಅವಧಿ ಮುಗಿದಿದೆ ಎಂದು ಲೋಕಸಭಾ ಚುನಾವಣೆಯಲ್ಲಿ ಜನ ತೋರಿಸಿದ್ದಾರೆ ಎಂದು ಹೇಳಿದರು.
ದೇಶದಲ್ಲಿ ಬಿಜೆಪಿ ನಿರೀಕ್ಷೆ ಮಾಡಿದಷ್ಟು ಸ್ಥಾನ ಕೆಲವು ರಾಜ್ಯಗಳಲ್ಲಿ ಬರದೆ ಇರಬಹುದು. ನಮ್ಮ ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ತಂದು ಕೊಡುವ ಮೂಲಕ ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು ಎಂಬ ಸಂದೇಶ ನೀಡಿದ್ದೇವೆ ಎಂದರು.
ದೇಶದಲ್ಲಿ ಬಹುಮತ ಸಿಕ್ಕದಿದ್ದರೂ ಕಾಂಗ್ರೆಸ್ ಪಕ್ಷ ವಾಮ ಮಾರ್ಗದ ಮೂಲಕ ಅಧುಕಾರ ಹಿಡಿಯಲು ಯತ್ನಿಸುತ್ತಿದೆ. ಅದು ಸಾಧ್ಯವಿಲ್ಲ.ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಲಿದ್ದಾರೆ ಎಂದು ಹೇಳಿದರು.