ಮಾಣಿಕಪ್ರಭು ಗೀತಾಸಾರ ಅದ್ಭುತ ಅಧ್ಯಾತ್ಮಿಕ ಕೃತಿ:ಆನಂದರಾಜ ಪ್ರಭು

ಬೀದರ:ಎ.23:ಗಂಗನಪಳ್ಳಿ ರಾಮರಾವರವರು ಮಾಣಿಕಪ್ರಭುಗಳನ್ನು ಉಸಿರಾಗಿಸಿಕೊಂಡು ಬದುಕುತ್ತಿದ್ದಾರೆ. ಇವರ ಪೂರ್ವಜರೂ ಕೂಡ ಮಾಣಿಕಪ್ರಭುಗಳ ಭಕ್ತರಾಗಿದ್ದರು. ಹಾಗಾಗಿ ಪ್ರಭು ಕೃಪೆ ಇವರ ಮೇಲಾಗಿದ್ದರಿಂದಲೇ ಶ್ರೀಮಾಣಿಕಪ್ರಭು ಗೀತಾಸಾರ ಈ ಅದ್ಭುತ ಅಧ್ಯಾತ್ಮಿಕ ಇವರು ಹೊರತರಲು ಸಾಧ್ಯವಾಗಿದೆ. ಇದಕ್ಕೂ ಮೊದಲು ಮಾಣಿಕಪ್ರಭು ಚರಿತ್ರಾಮೃತ ಇವರು ಕೃತಿ ಹೊರತಂದಿದ್ದಾರೆ. ಬ್ಯಾಂಕ್ ಉದ್ಯೋಗಿಯಾಗಿ ನಿವೃತ್ತಿಯಾಗಿರುವ ಇವರು ಈ 72ರ ಇಳಿವಯಸ್ಸಿನಲ್ಲೂ ವಕೀಲವೃತ್ತಿ ಮಾಡುತ್ತಾ, ಪ್ರಭು ಭಕ್ತಿ ಮತ್ತು ಸೇವೆ ಹೆಚ್ಚಾಗಿಸುತ್ತಾ, ಸಾಹಿತ್ಯ ರಚಿಸುತ್ತಾ ಸಾಗಿದ್ದು ಮಾದರಿಯಾಗಿದೆ. ಪ್ರಭು ಕುರಿತ ಸಾಹಿತ್ಯ ಅವರಿಂದ ಇನ್ನಷ್ಟು ಹೊರಬರಲಿ ಎಂಬುದು ನಮ್ಮ ಸದಾಶಯವಾಗಿದೆ ಎಂದು ಮಾಣಿಕಪ್ರಭು ಸಂಸ್ಥಾನದ ಕಾರ್ಯದರ್ಶಿಗಳಾದ ಆನಂದರಾಜ ಮಾಣಿಕಪ್ರಭುಗಳು ಹೇಳಿದರು. ಅವರು ದಿನಾಂಕ 22-04-2023ರಂದು ನಗರದ ಸಾಯಿಪುಷ್ಪಾಂಜಲಿ ಕಲ್ಯಾಣಮಂಟಪದಲ್ಲಿ ಜರುಗಿದ ಮಾಣಿಕಪ್ರಭು ಗೀತಾಸಾರ ಕೃತಿ ಲೋಕಾರ್ಪಣೆ ಮಾಡುತ್ತಾ ಹೇಳಿದರು.

  ಮುಂದುವರೆದು, ಮಾಣಿಕಪ್ರಭುಗಳ ಹಾಗೂ ಭಗವದ್ಗೀತೆಯ ಸಂಬಂಧ ಘನಿಷ್ಠವಾದುದಾಗಿದೆ. ಮತ್ತು ಸಾಮ್ಯತೆಯಿಂದ ಕೂಡಿದುದಾಗಿದೆ. ಹಾಗೆಂದೇ ಮಾಣಿಕಪ್ರಭುಗಳ ಬದುಕು ಮತ್ತು ಬೋಧೆಯಲ್ಲಿ ಭಗವದ್ಗೀತೆಗೆ ಅಗ್ರಸ್ಥಾನವಿತ್ತುದ್ದನ್ನು ನೋಡಬಹುದಾಗಿದೆ. ಭಗವದ್ಗೀತೆಯಂತೆ ನಡೆದರೆ ಸ್ವಕಲ್ಯಾಣ ಮತ್ತು ಲೋಕಕಲ್ಯಾಣವಾಗುತ್ತದೆ ಎಂದು ಪ್ರಭುಗಳು ಪ್ರತಿಪಾದಿಸುತ್ತಾ ಬಂದಿದ್ದಾರೆ. ಮಾಣಿಕಪ್ರಭುಗಳು ಸ್ವತಃ ಸಾಹಿತಿಗಳಾಗಿದ್ದರು. ಸಾಹಿತಿ, ಕಲಾವಿದರ ಪೋಷಕರಾಗಿದ್ದರು. ಪರಕೀಯರ ಆಡಳಿತದಲ್ಲೂ ಪ್ರಭು ಸಂಸ್ಥಾನ ಸ್ಥಾಪಿಸಿ, ಸರ್ವಧರ್ಮದ ಸಮನ್ವಯದ ತತ್ವದಡಿ ಅವರು, ಸನಾತನ ಧರ್ಮ ಇಲ್ಲಿ ನೆಲೆನಿಲ್ಲುವಂತೆ ಮತ್ತು ಪ್ರಖರವಾಗಿ ಬೆಳಗುವಂತೆ ಮಾಡಿದ್ದರು. ಮಾಣಿಕಪ್ರಭುಗಳಿಂದ ಪ್ರೇರಿತರಾಗಿ ಅನೇಕರು ಸಾಹಿತ್ಯ ರಚಿಸಿದ್ದಾರೆ ಎಂದರು. ಈ ಪರಂಪರೆ ಇಂದಿಗೂ ಮುಂದುವರೆಯುತ್ತಾ ಬರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.
 ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ ಮಾಣಿಕಪ್ರಭು ಸಂಸ್ಥಾನದ ಪೀಠಾಧಿಪತಿಗಳಾದ ಜ್ಞಾನರಾಜ ಪ್ರಭುಗಳು ಆಶೀರ್ವಚನ ನೀಡುತ್ತಾ, ಹಿಂದಿನ ಕಾಲದಿಂದಲೂ ಬೀದರ ನೆಲ ಅನೇಕ ಸಂತ-ಮಹಂತರ ನೆಲೆವೀಡಾಗಿದೆ. ಹಾಗಾಗಿಯೇ ಇಲ್ಲಿ ಅನೇಕ ದೇವಸ್ಥಾನಗಳು, ಮಠ, ಪೀಠಗಳು ಸ್ಥಾಪನೆಯಾಗಿವೆ. ಮಾಣಿಕಪ್ರಭುಗಳು ಕೂಡ ಬೀದರ ನಗರದಲ್ಲಿ ನೆಲೆನಿಂತು ಹೋಗಿದ್ದಾರೆ. ಇಲ್ಲಿ ಇವರು ಭಕ್ತರಿಗೆ ವಿಶ್ವರೂಪದರ್ಶನ ಸೇರಿದಂತೆ ಅನೇಕ ಲೀಲೆಗಳನ್ನು ತೋರ್ಪಡಿಸಿದ್ದಾರೆ. ಇವರ ಅನೇಕ ಭಕ್ತರು ಕಾಯಾ ವಾಚಾ ಮನಸಾ ಪ್ರಭುಸೇವೆಗೈದಿದ್ದಾರೆ. ಇಲ್ಲಿನ ಪನ್ಸಾಲ್ ತಾಲೀಮಿನಲ್ಲಿ ಮಾಣಿಕಪ್ರಭುಗಳÀ ದೇವಸ್ಥಾನ ಈಗಲೂ ಜಾಗೃತಾವಸ್ಥೆಯಲ್ಲಿದೆ. ಬೀದರನ ಮಾಣಿಕಪ್ರಭು ಸೇವಾ ಸಮಿತಿ ಸದಸ್ಯರು ಕ್ರಿ.ಶ.2007ರಿಂದ ಪ್ರಭುವಿನ ಅನೇಕ ವಿಧಾಯಕ ಕೆಲಸಕಾರ್ಯಗಳನ್ನು ಗೈಯುತ್ತಾ  ಸ್ಪೂರ್ತಿಯಾಗಿದ್ದಾರೆ.
 ಇವತ್ತಿನ ಮನುಷ್ಯ ಅನೇಕ ದ್ವಂದ್ವದಲ್ಲಿ ಬಿದ್ದಿದ್ದಾನೆ. ಭೌತಿಕ ಸಂಪತ್ತಿನ ಬೆನ್ನು ಬಿದ್ದು ಅಧ್ಯಾತ್ಮಿಕ ಸಂಪತ್ತು ನಿರ್ಲಕ್ಷಿಸುತ್ತಿದ್ದರಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ದೇವರು ಮನುಷ್ಯನಿಗೆ ಎಲ್ಲವೂ ಕೊಟ್ಟಿದ್ದಾನೆ. ಅವನ ಉಪಕಾರ ಬಲುದೊಡ್ಡದಿದೆ. ಒಳ್ಳೆ ಕಾರ್ಯಗಳನ್ನು ಮಾತ್ರ ಅವನು ಸ್ವೀಕರಿಸುತ್ತಾನಾದ್ದರಿಂದ ನಾವು ಒಳ್ಳೆಯವರಾಗಿ ಇನ್ನೊಬ್ಬರಿಗೆ ಒಳಿತನ್ನು ಮಾಡುವುದರ ಹಾಗೂ ದೇವಭಾವ, ದೇವಕಾರ್ಯದಲ್ಲಿ ಮತ್ತು ಪರೋಪಕಾರದಲ್ಲಿ ಇರುವುದರ ಮೂಲಕ ನಾವು ಜೀವನ ಸಾರ್ಥಕಪಡಿಸಿಕೊಳ್ಳಬಹುದಾಗಿದೆ.   
ಇವತ್ತು ಅಧ್ಯಾತ್ಮಿಕ ಜನರ ಮತ್ತು ಅಧ್ಯಾತ್ಮಿಕ ಸಾಹಿತ್ಯದ ಹೆಚ್ಚಳವಾಗಿಸಿದರೆ ಇಲ್ಲಿ ಅಧ್ಯಾತ್ಮ ಬೆಳೆಯಲು ಮತ್ತು ನೆಲೆ ನಿಲ್ಲಲು ಸಾಧ್ಯವಾಗುತ್ತದೆ. ಮತ್ತು ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಅಧ್ಯಾತ್ಮ ಜೀವಿಗಳಾದ ರಾಮರಾವ ಗಂಗನಪಳ್ಳಿಯವರು ತಮ್ಮ ಆದರ್ಶ ಆಧ್ಯಾತ್ಮ ಜೀವನದ ಜೊತೆ ಆದರ್ಶ ಆಧ್ಯಾತ್ಮ ಸಾಹಿತ್ಯ ರಚಿಸುತ್ತಿರುವುದು ಸ್ತುತ್ಯಾರ್ಹವಾಗಿದೆ ಎಂದರು.
  ಕಾರ್ಯಕ್ರಮದಲ್ಲಿ ಚೇತನರಾಜಪ್ರಭು, ಪಾಂಡುರಂಗರಾವ ಮಹಾರಾಜ ಸಾಧುಘಾಟ, ಮುದ್ದಪ್ಪ ವಕೀಲ, ಬಾಬುರಾವ ಕುಲಕರ್ಣಿ, ರಮೇಶ ಜಾಗೀರದಾರ, ಸಂಜೀವಕುಮಾರ ಭರಡೆ, ಚಂದ್ರಕಿರಣ ತಗಡಘರ, ಸೂರ್ಯಕಾಂತ ವಿಶ್ವಕರ್ಮ, ಇಸ್ಮಾಯಿಲ್ ಸಿಕಿಂದ್ರಾಪೂರ, ಎಂ.ಜಿ.ಗಂಗನಪಳ್ಳಿ, ಜಾಲಿಂದರ ಗಂಗನಪಳ್ಳಿ, ಸುರೇಶ ಕುಲಕರ್ಣಿ, ರಘುನಾಥರಾವ ಕುಲಕರ್ಣಿ, ಲಕ್ಷ್ಮಣರಾವ ಆಚಾರ್ಯ ಮತ್ತಿತರರು ಇದ್ದರು.