ಮಾಡು ಇಲ್ಲವೇ ಮಡಿ ಪಂಚಮಸಾಲಿ ಶ್ರೀಗಳ ಎಚ್ಚರಿಕೆ

ಹುಬ್ಬಳ್ಳಿ,ಜು. ೩೦: ಪಂಚಮಸಾಲಿ ಸಮಾಜಕ್ಕೆ ಸರ್ಕಾರ ೨ ಎ ಮೀಸಲಾತಿ ನೀಡದೇ ಹೋದರೆ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಪರಿಣಾಮ ಎದುರಿಸಬೇಕಾಗುವುದು ಖಚಿತ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ನಗರದಲ್ಲಿ ಪಂಚಮಸಾಲಿ ಸಮಾಜಕ್ಕೆ ೨ ಎ ಮೀಸಲಾತಿ ಕೊಡಬೇಕೆಂದು ಒತ್ತಾಯಿಸಿ ನಡೆದ ಬೃಹತ್ ರ್‍ಯಾಲಿ ಹಾಗೂ ಧರಣಿ ಸತ್ಯಾಗ್ರಹಕ್ಕೂ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಈಗಾಗಲೇ ಸರ್ಕಾರ ಮೂರು ಬಾರಿ ಸಮಾಜಕ್ಕೆ ಮೀಸಲಾತಿ ಕೊಡುವ ಭರವಸೆ ನೀಡಿ ಮಾತು ತಪ್ಪಿದೆ. ಅನಿವಾರ್ಯವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆಯ ಮುಂದೆ ಹೋರಾಟ ಆರಂಭಿಸುವ ಎಚ್ಚರಿಕೆ ನೀಡಿದಾಗ ಮುಖ್ಯಮಂತ್ರಿಗಳು ಸಮಾಜದ ಸಚಿವರ ಮೂಲಕ ಮತ್ತೊಮ್ಮೆ ಒಂದು ತಿಂಗಳ ಕಾಲಾವಕಾಶ ಕೇಳಿ ನಾಲ್ಕನೇ ಬಾರಿ ಮೀಸಲಾತಿ ಕೊಡುವ ಭರವಸೆ ನೀಡಿದ್ದರು. ಇದನ್ನು ಸರ್ಕಾರಕ್ಕೆ ನೆನಪಿಸುವ ಹಿನ್ನೆಲೆ ಇಂದು ಬೃಹತ್ ರ್‍ಯಾಲಿ ಹಾಗೂ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಈ ಮೂಲಕ ಸರ್ಕಾರಕ್ಕೆ ಶ್ರಾವಣ ಮಾಸ ಮುಗಿಯುವುದರೊಳಗಾಗಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಹಕ್ಕೋತ್ತಾಯ ಪತ್ರ ನೀಡಲಾಗುವುದು ಎಂದು ಅವರು ಹೇಳಿದರು.ಸರ್ಕಾರ ಅಗಸ್ಟ್ ೨೨ ರೊಳಗೆ ಸಮಾಜಕ್ಕೆ ಮೀಸಲಾತಿ ಕೊಡುವ ವಿಶ್ವಾಸವಿದೆ. ಆನಂತರವು ಮೀಸಲಾತಿ ಸಿಗದೇ ಹೋದಲ್ಲಿ ಮಾಡು ಇಲ್ಲವೇ ಮಡಿ ಎಂಬಂತೆ ಬೆಂಗಳೂರಿನಲ್ಲಿ ಸಮಾಜದ ಲಕ್ಷಾಂತರ ಜನರನ್ನು ಸೇರಿಸಿ ಬೃಹತ್ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಸರ್ಕಾರ ಈ ಕೊನೆಯ ಗಡವನ್ನು ಮೀರಿದರೆ ಮುಂದಿನ ಚುನಾವಣೆಯಲ್ಲಿ ಸರ್ಕಾರಕ್ಕೆ ಅದು ಪರಿಣಾಮ ಬೀರಲಿದ್ದು ಉದಾಹರಣೆಯಾಗಿ ಬೆಳಗಾವಿ, ಹಾನಗಲ್, ಸ್ಥಳೀಯ ಮಟ್ಟದ ಚುನಾವಣೆಗಳೇ ಇದಕ್ಕೆ ಸಾಕ್ಷಿ ಎಂದ ಅವರು ಹಿಂದೂಗಳ ರಕ್ಷಣೆಗಾಗಿ ಪರ್ಯಾಯ ರಾಜಕೀಯ ಶಕ್ತಿ ಅವಶ್ಯಕತೆ ಇದೆ ಎನ್ನುವುದಕ್ಕೆ ತಮ್ಮ ಸಹಮತ ಇದೆ ಎಂದು ಹೇಳಿದರು.