ಮಾಡು ಇಲ್ಲವೇ ಮಡಿಯಂತೆ ಪಂಚಮಸಾಲಿ 2ಎ ಮೀಸಲಾತಿ ಹೋರಾಟಃ ವಿಜಯಾನಂದ ಕಾಶಪ್ಪನವರ

ವಿಜಯಪುರ, ಜ.8-ಲಿಂಗಾಯತ ಪಂಚಮಸಾಲಿ ಸಮಾಜದ 2ಎ ಮೀಸಲಾತಿಗಾಗಿ ಈ ಬಾರಿ ನಮ್ಮ ಹೋರಾಟ ಮಾಡು ಇಲ್ಲವೇ ಮಡಿ ಎಂಬುದಾಗಿದೆ ಎಂದು ಮಾಜಿ ಶಾಸಕ ಅಖಿಲ ಭಾರತ ರಾಷ್ಟ್ರೀಯ ಲಿಂಗಾಯತ ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ವಿಜಯಾನಂದ ಕಾಶಪ್ಪನವರ ಶಪಥಗೈದರು.
ನಗರದ ಐಶ್ವರ್ಯನಗರ ಸಾಯಿವಿಹಾರದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜ ಬಾಂಧವರ 2ಎ ಮೀಸಲಾತಿ ಹೋರಾಟದ ಸಾರ್ವಜನಿಕ ಸಭೆಯನುದ್ದೇಶಿಸಿ ಮಾತನಾಡಿದ ಅವರು ಪಂಚಮಸಾಲಿ ಸಮಾಜದಲ್ಲಿ ಅಭಿಮಾನ ನನ್ನ ರಕ್ತದ ಕಣಕಣದಲ್ಲೂ ಇದೆ. ಸಮಾಜದ ಋಣ ತೀರಿಸುವ ಭಾರ ಹೊತ್ತು ನನ್ನ ರಾಜಕೀಯ ಜೀವನ ಮನೆ ಮಠ ಪ್ರಾಣವನ್ನು ಲೆಕ್ಕಿಸದೆ ಹೋರಾಡುವೆ. ಹಾಗೆಯೆ ಪ್ರತಿಯೊಬ್ಬರು ಮನಪೂರ್ವಕವಾಗಿ ಮನೆಯಿಂದ ಹೊರಬಂದು ಈ ಹೋರಾಟದಲ್ಲಿ ಧುಮುಕಿರಿ. ಇಲ್ಲದಿದ್ದರೆ ಮುಂಬರುವ ನಮ್ಮ ಜನಾಂಗ ನಮ್ಮನ್ನು ಕ್ಷಮಿಸದು. ಕಾರಣ ಸಮಸ್ತ ಸಮಾಜ ಬಾಂಧವರು ನಮ್ಮ ಮುಂಬರುವ ಪಂಚಮಸಾಲಿ ಸಮಾಜದ ಜನಾಂಗದ ಒಳತಿಗಾಗಿ ಪ್ರತಿಯೊಬ್ಬರು ಹೋರಾಟದಲ್ಲಿ ಭಾಗವಹಿಸಿ ಎಂದು ಕರೆ ನೀಡಿದರು.
ಪಂಚಮಸಾಲಿ ಸಮಾಜದ ರಾಷ್ಟ್ರೀಯ ವಕ್ತಾರರಾದ ಸಂಗಮೇಶ ಬಬಲೇಶ್ವರ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ ಒಬ್ಬ ದಿಟ್ಟು ಹೋರಾಟ ಮನೋಭಾವದ ಸಮಾಜದ ಒಳಿತನ್ನು ಮಾತೃ ಹೃದಯದ ಕಕ್ಕುಲಾತಿಯಿಂದ ಅಪ್ಪಿಕೊಂಡು ಮುನ್ನಡೆಸುವ ಜಗದ್ಗುರುಗಳಾದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಜಿಯವರು ದೊರೆತಿರುವುದು ನಮ್ಮೆಲ್ಲರ ಸುದೈವ. ಈ ಬಾರಿ ನಮಗೆ ಸರಕಾರ ಮೀಸಲಾತಿ ನೀಡದಿದ್ದರೆ ಭವಿಷ್ಯತ್ತಿನಲ್ಲಿ ನಮ್ಮ ಸಮಾಜ ಬಾಂಧವರು ಇನ್ನೂ ಹೆಚ್ಚಿನ ನೋವು ಅನುಭವಿಸಬೇಕಾದಿತು. ಅರ್ಹತೆ ಮತ್ತು ಯೋಗ್ಯತೆ ಇದ್ದರು ನಮ್ಮ ಯುವಕರು ಮತ್ತು ವಿದ್ಯಾರ್ಥಿಗಳು ಸ್ವಲ್ಪದರಲ್ಲಿಯೇ ಸರ್ಕಾರಿ ನೌಕರಿ ಮತ್ತಿತರ ಅವಕಾಶಗಳಿಂದ ವಂಚಿತರಾಗುತ್ತಿರುವುದು ದುರ್ದೈವ ನಾವು ದೈವವನ್ನು ಹಳಿಯದೆ ಜಗದ್ಗುರುಗಳ ಹಾಗೂ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಅವರ ನೇತೃತ್ವದಲ್ಲಿ ಪಂಚಲಕ್ಷ ಪಾದಯಾತ್ರೆಯ ಹೋರಾಟವನ್ನು ಯಶಸ್ವಿಗೊಳಿಸಿ 2ಎ ಮೀಸಲಾತಿ ಪಡೆಯೋಣ. ನಮ್ಮ ಹಣೆಬರಹವನ್ನು ನಾವೆ ಬದಲಾಯಿಸಿಕೊಳ್ಳೋಣ. ಮೀಸಲಾತಿ ನಮ್ಮ ಹಕ್ಕು ಅದು ಯಾರು ಕೊಡುವ ಬಿಕ್ಷೆ ಅಲ್ಲ. ಒಂದು ವೇಳೆ ಸರ್ಕಾರ ಕೂಡಲೆ ಸ್ಪಂಧಿಸದಿದ್ದರೆ ಸಮಾಜ ಬಾಂಧವರು ಉಗ್ರ ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದರು.
ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀ ಜಯಮೃತ್ಯುಂಜಯ ಸ್ವಾಮಿಜಿಯವರು ಈ ಹಿಂದೆ ನಾವು ವಿಧಾನಸೌಧದ ಮುತ್ತಿಗೆ ರಕ್ತದಾನ ಚಳುವಳಿ ಪಾದಯಾತ್ರೆ ಮೂಲಕ ನಾನಾ ರೀತಿ ಹೋರಾಟ ಕೈಗೊಂಡಾಗ ಮುಖ್ಯಮಂತ್ರಿ ಯಡಿಯೂರಪ್ಪನವರಾದಿಯಾಗಿ ಅನೇಕ ಆಡಳಿತ ಪಕ್ಷದ ಮಂತ್ರಿಗಳು ಮೀಸಲಾತಿ ನೀಡುತ್ತೇವೆ. ಹೋರಾಟ ಕೈಬಿಡಿ ಎಂದು ವಿನಂತಿಸಿ ಈಗ ಕೊಟ್ಟ ಮಾತಿಗೆ ನುಣಚಿಕೊಳ್ಳುತ್ತಿದ್ದಾರೆ. ಕಾರಣ ಜನೇವರಿ 14ರಂದು ಪಂಚಲಕ್ಷ ಪಾದಯಾತ್ರೆ ಸುಕ್ಷೇತ್ರ ಕೂಡಲಸಂಗಮದಿಂದ ಆಡಳಿತ ಕೇಂದ್ರ ಬೆಂಗಳೂರು ವಿಧಾನಸೌಧದವರೆಗೆ ಕೈಗೊಂಡು ನಮ್ಮ ಸಮಾಜದ 2ಎ ಮೀಸಲಾತಿಗಾಗಿ ಹಕ್ಕೊತ್ತಾಯ ಮಂಡಿಸಲಿದ್ದೇವೆ. ಕಾರಣ ಪ್ರತಿಯೊಬ್ಬರು ಪಂಚಲಕ್ಷ ಪಾದಯಾತ್ರೆಯಲ್ಲಿ ಜನೇವರಿ 14ರಿಂದ ತಮ್ಮೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.
ವೇದಿಕೆಯ ಮೇಲೆ ಹಿಕ್ಕನಗುತ್ತಿಯ ಪ್ರಭುಲಿಂಗ ಶರಣರು, ಜಿಲ್ಲಾ ಕಾರ್ಯಾಧ್ಯಕ್ಷ ಡಾ. ಸಿ.ಎಸ್. ಸೋಲಾಪುರ, ಜಿಲ್ಲಾ ಉಪಾಧ್ಯಕ್ಷ ಎಮ್.ಪಿ. ಬಾದನ (ಹಿಕ್ಕನಗುತ್ತಿ), ರಾಜ್ಯ ಯುವಘಟಕದ ಅಧ್ಯಕ್ಷ ಸೋಮಶೇಖರ ಅಲ್ಯಾಳ, ರಾಜ್ಯ ಪಂಚಸೈನ್ಯ ಅಧ್ಯಕ್ಷ ಡಾ. ಬಸನಗೌಡ ಪಾಟೀಲ್ (ನಾಗರಾಳಹುಲಿ) ರಾಜ್ಯ ಪಂಚಮಸಾಲಿ ರೈತ ವಿಭಾಗದ ಅಧ್ಯಕ್ಷ ಅಂಬರೀಶ ನಾಗೂರ, ರಾಷ್ಟ್ರೀಯ ದಾಸೋಹ ಸಮಿತಿ ಕಾರ್ಯಾಧ್ಯಕ್ಷ ಅರ್ಜುನ ದೇವಕ್ಕಿ, ರಾಜ್ಯ ವಿದ್ಯಾರ್ಥಿ ಘಟಕದ ಅಧ್ಯಕ್ಷ ವಿಜಯಕುಮಾರ ಪೂಜಾರಿ, ರಾಜ್ಯ ಯುವಘಟಕದ ಕಾರ್ಯದರ್ಶಿ ಶಂಕರಗೌಡ ಬಿರಾದಾರ, ವಿರಾಜ್ ಪಾಟೀಲ್, ಯುವಮುಖಂಡ ವಿರಾಜ ಪಾಟೀಲ್, ನಗರ ಘಟಕದ ಅಧ್ಯಕ್ಷ ಶ್ರೀಶೈಲ ಬುಕ್ಕಣ್ಣಿ, ಜಿಲ್ಲಾ ವೈದ್ಯಕೀಯ ಪ್ರಕೊಷ್ಟದ ಉಪಾಧ್ಯಕ್ಷ ಮಲ್ಲು ಕಲಾದಗಿ, ಯುವಘಟಕದ ಅಧ್ಯಕ್ಷ ಸೋಮು ದೇವರ ಇಂಡಿ, ಮಹಿಳಾ ಘಟಕದ ಶ್ರೀಮತಿ ಜ್ಯೋತಿ ಪಾಗಾದ, ಶ್ರೀಮತಿ ಉಮಾ ಪಾಟೀಲ, ಶ್ರೀಮತಿ ಪೂರ್ಣಿಮಾ ಕಕಮರಿ, ಯುವಘಟಕದ ಕಾರ್ಯದರ್ಶಿ ನಿಂಗನಗೌಡ ಸೋಲಾಪುರ, ನಗರ ಘಟಕದ ಕಾರ್ಯದರ್ಶಿ ಸದಾಶಿವ ಅಳ್ಳಿಗಿಡದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾಧ್ಯಕ್ಷ ಬಿ.ಎಮ್. ಪಾಟೀಲ್ ದೇವರ ಹಿಪ್ಪರಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ವಕ್ತಾರ ದಾನೇಶ ಅವಟಿ ನಿರೂಪಿಸಿದರು. ಬಿ.ಎನ್. ಪಾಟೀಲ್ ವಂದಿಸಿದರು.
ಅಪ್ಪಾಸಾಬ ಯರನಾಳ, ನಿಂಗಪ್ಪ ಸಂಗಾಪುರ, ಮಂಜುನಾಥ ನಿಡೋಣಿ, ಅಮೀತ ಇಂಡಿ, ಸಂತೋಷ ಹಂಜಿ, ಸಿದ್ದು ಅವಟಿ ಮುಂತಾದವರು ಉಪಸ್ಥಿತರಿದ್ದರು.