ಮಾಡುವ ಕಾರ್ಯದಲ್ಲಿ ಸಂತೃಪ್ತಿ ಇರಬೇಕು: ಜಾಧವ

ಭಾಲ್ಕಿ: ಎ.4:ನಾವು ಮಾಡುವ ಯಾವುದೇ ಕಾರ್ಯವಿರಲಿ ಅದರಲ್ಲಿ ಸಂತೃಪ್ತಿ ಇರಬೇಕು ಎಂದು ನಿವೃತ್ತ ಶಿಕ್ಷಕ ಕಿಶನರಾವ ಜಾಧವ ಹೇಳಿದರು.

ಪಟ್ಟಣದ ಜಾಧವ ನಿವಾಸದಲ್ಲಿ ಔರಾದ ತಾಲೂಕಿನ ಸಂಗಂ ಗ್ರಾಮದಲ್ಲಿ ಸುಮಾರು 35 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕಿಶನರಾವ ಜಾಧವ ರವರಿಗೆ ಎಸ್‍ಆರ್‍ಸಿಎಮ್ ಅಭ್ಯಾಸಿ ಬಳಗದ ವತಿಯಿಂದ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಮಾಡುವ ಪ್ರತಿಯೊಂದು ಕಾರ್ಯದಲ್ಲಿಯೂ ತನ್ಮಯತೆ ಇರಬೇಕು. ಶಿಕ್ಷಕರಾಗಿ ಸೇವೆ ಸಲ್ಲಿಸುವುದು ಬೇರೆ ಎಲ್ಲಾ ಸೇವೆಗಳಿಗಿಂತಲೂ ಸಂತೃಪ್ತಿ ತಂದು ಕೊಡುತ್ತದೆ. ನಿವೃತ್ತಿಯ ನಂತರವೂ ಶಿಕ್ಷಕರಿಗಿರುವ ಗೌರವ ಮತ್ಯಾವ ಕ್ಷೇತ್ರದಲ್ಲಿಯೂ ಸಿಗದು ಎಂದು ಹೇಳಿದರು.

ಕಾರ್ಯಕ್ರಮದ ಆಯೋಜಕ ನಿವೃತ್ತ ಮುಖ್ಯ ಶಿಕ್ಷಕ ಡಿ.ಡಿ.ಸಿಂಧೆ ಮಾತನಾಡಿ, ಕಿಶನರಾವ ಜಾಧವ ರವರು ತಮ್ಮ ಸೇವೆಯಲ್ಲಿ ಎಲ್ಲರನ್ನೂ ಪ್ರೀತಿಯಿಂದ ಕಂಡು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಇಂದಿಗೂ ಅವರಿಗೆ ಎಲ್ಲರೂ ಪ್ರೀತಿಸುತ್ತಾರೆ ಎಂದು ಹೇಳಿದರು.

ನಿವೃತ್ತ ಶಿಕ್ಷಕ ಶಿವಕುಮಾರ ಘಂಟೆ, ಬಸವರಾಜ ಹಡಪದ, ನಿವೃತ್ತ ಅಭಿಯಂತರ ಸೋಮಶೇಖರ ವಡ್ಡೆ, ಬಸವರಾಜ ಬಾಳೂರೆ ಕಿಶನರಾವ ಜಾಧವ ರವರ ಕಾರ್ಯಕ್ಷಮತೆಯ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಓಂಕಾರ ನುಚ್ಚಾ, ಶೋಭಾ ಜಯರಾಜ, ಸಚಿನ ಪವಾರ, ಅತುಜ ಜಾಧವ, ವೀರೇಶ ಘಂಟೆ, ಸುಲೋಚನಾ ವಡ್ಡೆ ಉಪಸ್ಥಿತರಿದ್ದರು.

ಮಲ್ಲಿಕಾರ್ಜುನ ಜಗದೇವ ಸ್ವಾಗತಿಸಿದರು. ಜಯರಾಜ ದಾಬಶೆಟ್ಟಿ ನಿರೂಪಿಸಿದರು. ಕಲ್ಪನಾ ಜಾಧವ ವಂದಿಸಿದರು.