ಮಾಡಾಳ್ ವಿಚಾರಣೆ ಪೊಲೀಸರಿಗೆ ಬಿಟ್ಟ ವಿಚಾರ

ಬೆಂಗಳೂರು,ಮಾ.೩- ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್‌ಡಿಎಲ್) ಟೆಂಡರ್ ಅಂತಿಮಗೊಳಿಸಲು ಲಂಚ ಪಡೆದ ಪ್ರಕರಣದಲ್ಲಿ ಕಾರ್ಖಾನೆಯ ಅಧ್ಯಕ್ಷ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಅವರನ್ನು ವಿಚಾರಣೆ ನಡೆಸುವ ಕುರಿತು ತನಿಖಾ ತಂಡದಲ್ಲಿರುವ ಪೊಲೀಸ್ ಅಧಿಕಾರಿಗಳು ನಿರ್ಧರಿಸುತ್ತಾರೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ತಿಳಿಸಿದರು.
ಕೆಎಸ್‌ಡಿಎಲ್ ಟೆಂಡರ್‌ಗೆ ಸಂಬಂಧಿಸಿದ ಕಾರ್ಯಾದೇಶ ನೀಡಲು ೪೦ ಲಕ್ಷ ಲಂಚ ಪಡೆಯುತ್ತಿದ್ದ ಪ್ರಶಾಂತ್ ಅವರನ್ನು ಬಂಧಿಸಲಾಗಿದೆ. ಅವರೊಂದಿಗೆ ಲಂಚದ ಹಣ ನೀಡಲು ಬಂದಿದ್ದ ಇತರ ಮೂವರು ಅಕೌಂಟೆಂಟ್ ಅವರನ್ನೂ ಬಂಧಿಸಲಾಗಿದೆ ಎಂದರು.
ಕಾರ್ಯಾಚರಣೆ ನಡೆಸುವಲ್ಲಿ ಯಶಸ್ವಿಯಾದ ಲೋಕಾಯುಕ್ತ ಪೊಲೀಸ್ ವಿಂಗ್ ಅಧಿಕಾರಿಗಳನ್ನು ಹಾಗೂ ದೂರುದಾರರನ್ನು ಪತ್ರಿಕಾಗೋಷ್ಠಿಯಲ್ಲಿ ಲೋಕಾಯುಕ್ತರು ಶ್ಲಾಘಿಸಿದರು.
ಪ್ರಶಾಂತ್ ಮಾಡಾಳ್ ಕರ್ನಾಟಕ ರಾಜ್ಯ ಸಾಬುನು ಹಾಗೂ ಮಾರ್ಜಕ ನಿಗಮಕ್ಕೆ ಕಚ್ಚಾ ವಸ್ತುಗಳ ಪೂರೈಕೆ ಸಂಬಂಧ ಟೆಂಡರ್ ವಿಚಾರವಾಗಿ ಭಾಗವಹಿಸಲು ೮೦ ಲಕ್ಷ ರೂಪ ಲಂಚ ಕೇಳಿದ್ದರು. ಈ ವಿಚಾರವಾಗಿ ದೂರುದಾರರು ದೂರು ನೀಡಿ ಲಂಚ ಕೇಳುತ್ತಿರುವ ಭ್ರಷ್ಟರನ್ನು ಹಿಡಿಯಬೇಕೆಂದು ಮನವಿ ಮಾಡಿದ್ದರು ಎಂದರು.
೬ ಕೋಟಿ ೧೦ ಲಕ್ಷ ಜಪ್ತಿ:
ನಿನ್ನೆ ರಾತ್ರಿಯಿಡೀ ನಡೆದ ದಾಳಿಯಲ್ಲಿ ಕಚೇರಿಯ ೨ ಕೋಟಿ ೨ ಲಕ್ಷ ಜಪ್ತಿ ಆಗಿದೆ. ಮನೆಯಲ್ಲಿ ೬ ಕೋಟಿ ೧೦ ಲಕ್ಷ ಸಿಕ್ಕಿದ್ದು ತನಿಖೆ ಶುರುವಾಗಿದೆ. ಈ ವಿಚಾರದದಲ್ಲಿ ನಾವು ನಮ್ಮ ಸಂಸ್ಥೆ ಅಧಿಕಾರಿ, ಪೊಲೀಸ್ ವಿಂಗ್ ಅಧಿಕಾರಿಗಳಿಗೆ ಗೌರವಿಸಬೇಕು.
ಇನ್ನು ದೂರು ನೀಡಿದವರನ್ನೂ ಕೂಡ ಗೌರವಿಸಬೇಕು. ಇಂತಹ ದೂರು ನೀಡುವ ಶಕ್ತಿ ಎಲ್ಲರಲ್ಲೂ ಬಂದರೆ ಭ್ರಷ್ಟಾಚಾರ ಹೋಗಲಾಡಿಸಲು ಸಾಧ್ಯವಾಗುತ್ತದೆ. ಎಂತಹ ತಿಮಿಂಗಿಲವನ್ನು ಹಿಡಿಯಲು ಸಾಧ್ಯವಾಗುತ್ತದೆ. ಪ್ರತಿ ಜಿಲ್ಲೆಯಲ್ಲಿ ಅಧಿಕಾರಿಗಳಿದ್ದಾರೆ. ಸಾರ್ವಜನಿಕರಲ್ಲಿ ಹಣ ಕೇಳಿದಾಗ ದೂರು ನೀಡಿ ಎಂದರು.
ಐವರು ಕಸ್ಟಡಿಗೆ:
ದಾಳಿಯ ವೇಳೆ ಐವರನ್ನು ವಶಕ್ಕೆ ತೆಗೆದುಕೊಂಡಿದ್ದೇವೆ. ಅದರಲ್ಲಿ ಪ್ರಶಾಂತ್, ಅಕೌಂಟೆಂಟ್ ಮತ್ತು ಲಂಚವನ್ನು ಸ್ವೀಕರಿಸುವವರು ಇವರೊಂದಿಗಿದ್ದರು. ಹೆಚ್ಚಿನ ವಿಚಾರವನ್ನು ಹೇಳುವುದು ಬೇಡ. ವಿಚಾರಣೆ ನಡೆಯುತ್ತಿದೆ.ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.ವಿರೂಪಾಕ್ಷಪ್ಪ ಅವರ ಮೇಲೆ ತನಿಖೆ ನಡೆಯುವ ವಿಚಾರವಾಗಿ ಮಾತನಾಡಿದ ಲೋಕಾಯುಕ್ತರು, ಈ ವಿಚಾರವಾಗಿ ಯಾರೆಲ್ಲಾ ತಪ್ಪಿತಸ್ಥರಿದ್ದಾರೆ ಅವರ ಮೇಲೆ ಎಫ್‌ಐಆರ್ ಆಗುತ್ತದೆ. ಯಾರಾರು ಅಪರಾಧಿ ಆಗಿ ಸೇರ್ಪಡೆ ಆಗಬೇಕು ಎಂದು ಪೊಲೀಸರು ತೀರ್ಮಾನಿಸು?ತ್ತಾರೆ. ಕಾನೂನಿನ ಕಣ್ಣಿಗೆ ಎಲ್ಲರೂ ಒಂದೇ. ಕಾನೂನಿನ ಅಡಿಯಲ್ಲಿ ತನಿಖೆ ನಡೆಸಲಾಗುತ್ತದೆ. ಸಾರ್ವಜನಿಕರಿಗೆ ವಿನಂತಿ ಮಾಡಿಕೊಳ್ಳುವುದೇನೆಂದರೆ. ಇಂತಹ ಭಷ್ಟಾಚಾರವನ್ನು ಹೊಡೆದೋಡಿಸಲು ಕೈಜೋಡಿಬೇಕು ಎಂದು ಹೇಳಿದರು.