ಮಾಡಾಳ್ ಕಸ್ಟಡಿಗೆ ಲೋಕಾ ಸಿದ್ಧತೆ

ಬೆಂಗಳೂರು,ಮಾ.೨೮-ಪುತ್ರನ ಲಂಚ ಸ್ವೀಕಾರ ಪ್ರಕರಣದಲ್ಲಿ ಸಿಲುಕಿರುವ ಚನ್ನಗಿರಿಯ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಲೋಕಾಯುಕ್ತ ಪೋಲಿಸರು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ. ವಿರೂಪಾಕ್ಷಪ್ಪ ರಾತ್ರಿಯಿಡೀ ಲೋಕಾಯುಕ್ತ ಕಚೇರಿಯಲ್ಲೇ ಕಳೆದಿದ್ದಾರೆ.ತೀವ್ರ ವಿಚಾರಣೆ ನಡೆಸಿದ ಬಳಿಕವು ಹಣ ಮೂಲಕ್ಕೆ ನಿಖರವಾದ ದಾಖಲೆಗಳನ್ನು ನೀಡಲು ವಿಫಲವಾಗಿರುವ ಮಾಡಾಳ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಕಸ್ಟಡಿಗೆ ಪಡೆಯಲು ಮುಂದಾಗಿದ್ದಾರೆ.ಕ್ಯಾತ್ಸಂದ್ರದ ಬಳಿ ಕಾರ್ಯಾಚರಣೆ ಕೈಗೊಂಡು ಸಂಜೆ ಬಂಧಿಸಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪರನ್ನು ಲೋಕಾಯುಕ್ತ ಪೊಲೀಸರು ಮೊದಲಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಹೃದ್ರೋಗದ ಹಿನ್ನೆಲೆಯಲ್ಲಿ ಇಸಿಜಿ, ರಕ್ತದೊತ್ತಡ, ಮಧುಮೇಹ ಸೇರಿದಂತೆ ಸಾಮಾನ್ಯ ತಪಾಸಣೆ ನಡೆಸಲಾಯಿತು. ಈ ವೇಳೆ ನಾನು ಮೊದಲೇ ಹೃದ್ರೋಗಿ, ಎದೆ ನೋವು ಬರುತ್ತಿದೆ ಎಂದು ಹೇಳಿದರು.ಆದರೆ ಶಾಸಕರ ಆರೋಗ್ಯ ಸಾಮಾನ್ಯವಾಗಿದೆ ಎಂದು ಬೌರಿಂಗ್ ಆಸ್ಪತ್ರೆ ವೈದ್ಯರು ಖಚಿತಪಡಿಸಿದ ಬಳಿಕ ರಾತ್ರಿ ೯-೪೫ರ ಸುಮಾರಿಗೆ ಮಾಡಾಳುರನ್ನು ಲೋಕಾಯುಕ್ತ ಕಚೇರಿಗೆ ಕರೆತರಲಾಯಿತು.ಕಚೇರಿಯಲ್ಲಿಯೇ ಮಾಡಾಳ್ ಅವರನ್ನು ವಿಚಾರಣೆ ನಡೆಸಿದ್ದು, ರಾತ್ರಿ ಲೋಕಾಯುಕ್ತ ಕಚೇರಿಯಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ತಂಗಲು ಅವಕಾಶ ಕಲ್ಪಿಸಲಾಯಿತು.
ವಿರೂಪಾಕ್ಷಪ್ಪಗೆ ಮಲಗಲು ಅವರ ಆಪ್ತರು ಕಬ್ಬಿಣದ ಮಂಚ ತಂದು ಕೊಟ್ಟರು. ಚಾಪೆ, ತಿಂಬು, ಬೆಡ್ ಶೀಟ್ ಸೇರಿದಂತೆ ರಾತ್ರಿ ಊಟ, ನೀರಿನ ಬಾಟಲ್ ತಂದುಕೊಟ್ಟರು. ಬಳಿಕ ನನಗೆ ಟೋಪಿ ಬೇಕೆಂದು ಅದನ್ನು ಶಾಸಕರು ತರಿಸಿಕೊಂಡರು.
ಹಾಸಿಗೆ ದಿಂಬು:
ರಾತ್ರಿ ೧೨ ಗಂಟೆವರೆಗೆ ಲೋಕಾಯುಕ್ತ ಅಧಿಕಾರಿಗಳು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.ಆದರೆ,ಯಾವೊಂದು ಪ್ರಶ್ನೆಗೂ ಸರಿಯಾಗಿ ಉತ್ತರ ನೀಡಿಲ್ಲ. ೮ ಕೋಟಿ ಎಲ್ಲಿಂದ ಬಂತು ಅದರ ಮೂಲ ಯಾವುದು ಎಲ್ಲಿಗೆ ತಲುಪಿಸುತ್ತಿದ್ದರು ಮುಂತಾದ ಪ್ರಶ್ನೆಗಳನ್ನು ಮಾಡಾಳ್ ಮುಂದೆ ಇಡಲಾಗಿತ್ತು. ಆದರೆ, ಉತ್ತರಿಸಲು ಅವರು ತಡಬಡಾಯಿಸಿದ್ದಾರೆ.
ವಿಚಾರಣೆ ಮುಗಿಸಿ, ತನಿಖಾಧಿಕಾರಿಗಳು ಹೊರಟ ಬಳಿಕ ಮಾಡಾಳ್, ಅಲ್ಪಸ್ವಲ್ಪ ನಿದ್ರೆಗೆ ಜಾರಿದ್ದರು. ಲೋಕಾಯುಕ್ತ ಕಚೇರಿಯಲ್ಲಿ ಮೊದಲ ರಾತ್ರಿ ಕಳೆದ ಮಾಡಾಳ್ ಅವರ ರಾತ್ರಿ ವಾಸ್ತವ್ಯಕ್ಕೆ ಪ್ರತ್ಯೇಕ ಮಂಚ, ಹಾಸಿಗೆ, ದಿಂಬು, ಊಟ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿತ್ತು.ತಮ್ಮ ಆಪ್ತರ ಮೂಲಕ ಲೋಕಾ ಕಚೇರಿಗೆ ಮಾಡಾಳ್ ಎಲ್ಲವನ್ನು ತರಿಸಿಕೊಂಡರು.
ಕೋರ್ಟ್‌ಗೆ ಹಾಜರು:
ಈ ಮಧ್ಯೆ ಶಾಸಕ ಮಾಡಳ್ ವಿರೂಪಾಕ್ಷಪ್ಪ ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಎದುರು ಹಾಜರು ಪಡಿಸಿ, ತಮ್ಮ ಕಸ್ಟಡಿಗೆ ಕೇಳಲಿದ್ದಾರೆ.ಹೆಚ್ಚಿನ ವಿಚಾರಣೆ ಅಗತ್ಯ ಹಿನ್ನಲೆಯಲ್ಲಿ ಮತ್ತೆ ವಶಕ್ಕೆ ನೀಡುವಂತೆ ಮನವಿ ಮಾಡಲಿದ್ದಾರೆ. ಈ ಹಿಂದೆ ವಿಚಾರಣೆಗೆ ಹಾಜರಾಗಿದ್ದ ಸಮಯದಲ್ಲೂ ಸರಿಯಾಗಿ ಸಹಕಾರ ನೀಡಿಲ್ಲ ಮತ್ತು ಸಮರ್ಪಕವಾದ ಉತ್ತರ ನೀಡಿಲ್ಲ. ಹಣದ ಮೂಲಕ್ಕೆ ಪೂರಕವಾದ ಸಾಕ್ಷ್ಯಾಧಾರಗಳನ್ನು ಸಹ ಒದಗಿಸಿಲ್ಲ. ಹಣದ ಮೂಲದ ಕುರಿತಂತೆ ಪುರಾವೆ ನೀಡಲು ಮೀನಮೇಷ ಎಣಿಸುತ್ತಿದ್ದಾರೆ. ಹಲವು ಬಾರಿ ವಿಚಾರಣೆ ವೇಳೆಯಲ್ಲೂ ಹಣದ ಮೂಲದ ದಾಖಲೆ ನೀಡಲು ವಿಫಲವಾಗಿದ್ದಾರೆ. ಮೊದಲಿಗೆ ಕೃಷಿ ಮೂಲದ ಹಣ ಎಂದು ಮಾಡಳ್ ವಿರೂಪಾಕ್ಷಪ್ಪ ಹೇಳಿದ್ದರು. ಆ ಬಳಿಕ ವಿಚಾರಣೆ ವೇಳೆ ಸೂಕ್ತ ದಾಖಲೆಗಳ ಒದಗಿಸಿ, ಸಮರ್ಥಿಸಲು ತಡಬಡಾಯಿಸಿದ್ದರು. ಹೀಗಾಗಿ ಕಸ್ಟಡಿಗೆ ಕೇಳಲು ಅಧಿಕಾರಿಗಳು ಮುಂದಾಗಿದ್ದಾರೆ.