
ಬೆಂಗಳೂರು, ಮಾ. ೮-ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಒಂದೇ ದಿನದಲ್ಲಿ ಜಾಮೀನು ಕೊಡಿಸುವಲ್ಲಿ ಸರ್ಕಾರ ಶಾಮೀಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಹಾಗೂ ಸರ್ಕಾರಿ ವಕೀಲರ ಬೆಂಬಲ ಇಲ್ಲದೆ ಕೇವಲ ಒಂದೇ ದಿನದಲ್ಲಿ ಜಾಮೀನು ಸಿಗಲು ಹೇಗೆ ಸಾಧ್ಯ. ಬೇರೆ ಪಕ್ಷದವರಿಗೆ ಇಂಥ ಪ್ರಕರಣದಲ್ಲಿ ೨-೩ ತಿಂಗಳಾದರೂ ಜಾಮೀನು ಸಿಗುವುದಿಲ್ಲ. ಸರ್ಕಾರದ ಪರ ವಕೀಲರು ಜಾಮೀನು ನೀಡಲೇಬಾರದು ಎಂದು ವಾದ ಮಾಡುತ್ತಾರೆ. ಆದರೆ ಇಲ್ಲಿ ಒಂದೇ ದಿನಕ್ಕೆ ಜಾಮೀನು ಕೊಡಿಸಿದ್ದಾರೆ ಎಂದು ದೂರಿದರು.
ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರಿಗೆ ಒಂದೇ ದಿನದಲ್ಲಿ ಜಾಮೀನು ಸಿಕ್ಕಿರುವ ಬಗ್ಗೆ ವಕೀಲರ ಸಂಘದವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಚಂದ್ರಚೂಡ್ ಅವರಿಗೆ ಪತ್ರ ಬರೆದಿದ್ದಾರೆ. ಈ ರೀತಿ ಒಂದೇ ದಿನದಲ್ಲಿ ಜಾಮೀನು ನೀಡಿರುವುದು ಆತಂಕಕಾರಿ ವಿಚಾರ. ಇದರಿಂದ ಜನಸಾಮಾನ್ಯರು ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಮಾಡುತ್ತದೆ. ಹೀಗಾಗಿ ಶಾಸಕರನ್ನು ವಿಐಪಿಯಂತೆ ನೋಡುವ ಬದಲು ಸಾಮಾನ್ಯರಂತೆ ಕಾಣಬೇಕು ಎಂದು ಅವರು ಹೇಳಿದರು.
ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಮುಖವಾಡ ಕಳಚಿದೆ. ಬಿಜೆಪಿ ನಾಯಕರೇ ಹೆಚ್ಚು ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ ಎಂದು ಅವರು ಹೇಳಿದರು.
ಶಾಲಾ-ಕಾಲೇಜುಗಳ ಪರೀಕ್ಷೆ ಹಿನ್ನೆಲೆಯಲ್ಲಿ ನಾಳಿನ ಕಾಂಗ್ರೆಸ್ ಬಂದ್‌ನ್ನು ಹಿಂಪಡೆಯಲಾಗಿದೆ. ಎಲ್ಲ ನಾಯಕರು ಚರ್ಚಿಸಿ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಈ ತೀರ್ಮಾನ ಮಾಡಿದ್ದೇವೆ ಎಂದು ಎಂದು ಅವರು ತಿಳಿಸಿದರು.