ಮಾಡಾಳು ಕೆರೆಗೆ ಜೆಡಿಎಸ್-ಬಿಜೆಪಿ ನಾಯಕರಿಂದ ಗಂಗಾಪೂಜೆ

ಅರಸೀಕೆರೆ, ನ. ೧೪- ರಾಜಕೀಯವಾಗಿ ಭಿನ್ನಾಭಿಪ್ರಾಯವಿದ್ದರೂ ತಾಲ್ಲೂಕಿನ ಮಾಡಾಳು ಗ್ರಾಮದ ಕೆರೆಯನ್ನು ಆವರಿಸಿರುವ ಹೇಮಾವತಿಗೆ ಬಾಗಿನ ಸಮರ್ಪಿಸುವ ಮೂಲಕ ಶಾಸಕ ಕೆ.ಎಂ. ಶಿವಲಿಂಗೇಗೌಡ ಹಾಗೂ ಕಳೆದ ವಿಧಾನಸಭೆ ಚುನಾವಣೆಯ ಬಿಜೆಪಿಯ ಪರಾಜಿತ ಅಭ್ಯರ್ಥಿ ಮರಿಸ್ವಾಮಿ ಗಮನ ಸೆಳೆದರು.
ಗ್ರಾಮಸ್ಥರು ಆಯೋಜಿಸಿದ್ದ ಗಂಗೆ ಪೂಜೆ ಮಾಡುವ ಮೂಲಕ ಬಾಗಿನ ಸಮರ್ಪಿಸುವ ಕಾರ್ಯಕ್ರಮದಲ್ಲಿ ತಮ್ಮ ತಮ್ಮ ಪಕ್ಷದ ಬೆಂಬಲಿಗರೊಂದಿಗೆ ಪಾಲ್ಗೊಂಡಿದ್ದ ಉಭಯ ನಾಯಕರು ಗಂಗಾ ಮಾತೆಗೆ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ ಬಾಗಿನ ಸಮರ್ಪಿಸಿದರು.
ನಂತರ ಮಾತನಾಡಿದ ಶಾಸಕ ಶಿವಲಿಂಗೇಗೌಡ, ಇಚ್ಛಾಶಕ್ತಿಯಿದ್ದರೆ ಯಾವ ಕೆಲಸವೂ ಅಸಾಧ್ಯವಲ್ಲ ಎಂಬುದಕ್ಕೆ ತಾಲ್ಲೂಕಿನ ಜನತೆಯ ದಾಹ ತಣಿಸುತ್ತಾ ಕೆರೆ ಕಟ್ಟೆಗಳಲ್ಲಿ ಸಂಗ್ರಹವಾಗುತ್ತಿರುವ ಹೇಮಾವತಿ ನದಿ ನೀರು ಸಾಕ್ಷಿಯಾಗಿದೆ. ಜಿಲ್ಲೆಯಲ್ಲಿ ಹೇಮಾವತಿ ಯಗಚಿ ಹಾಗೂ ವಾಟೇಹೊಳೆ ಜಲಾಶಯಗಳು ಹರಿದರೂ ಶಾಪಗ್ರಸ್ತರೆಂಬಂತೆ ವ್ಯವಸಾಯಕ್ಕೆಇರಲಿ ಕುಡಿಯುವ ನೀರಿಗೂ ಮುಗಿಲ ಮಳೆಯನ್ನೇ ನೆಚ್ಚಿಕೊಂಡು ಬಂದಿದ್ದ ತಾಲ್ಲೂಕಿನ ಜನತೆಯ ಶಾಪ ವಿಮೋಚನೆಯಾಗಿದೆ ಎಂದರು.
ಹೊನ್ನವಳ್ಳಿ ಏತ ನೀರಾವರಿ ಯೋಜನೆಯಡಿ ಕಣಕಟ್ಟೆ ಹೋಬಳಿಯ ಐದು ಕೆರೆಗಳಿಗೆ ನೀರು ತುಂಬಿಸುವುದು ಸೇರಿದಂತೆ ನಗರದ ಜನತೆಗೆ ೨೪x೭ ಯೋಜನೆಯಡಿ ಕುಡಿಯುವ ನೀರು ಅದೇ ರೀತಿ ಬಹು ಹಳ್ಳಿಗಳಿಗೆ ಕುಡಿಯುವ ನೀರು ಯೋಜನೆಯಡಿ ತಾಲ್ಲೂಕಿನ ೫೭೧ ಗ್ರಾಮಗಳ ಜನತೆಗೆ ನದಿ ಮೂಲದಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು ಅಂದುಕೊಂಡಂತೆ ಎಲ್ಲವೂ ಆದರೆ ಇನ್ನೂ ೧ವರ್ಷದೊಳಗೆ ಎತ್ತಿನಹೊಳೆ ಯೋಜನೆಯ ಅನುಷ್ಠಾನದೊಂದಿಗೆ ತಾಲ್ಲೂಕಿನ ಬಹುತೇಕ ಕೆರೆ ಕಟ್ಟೆಗಳಿಗೆ ನೀರು ತುಂಬಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಏತ ನೀರಾವರಿ ಯೋಜನೆ ಸೇರಿದಂತೆ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೂ ನಾನಾ ಅಡೆತಡೆಗಳು ಎದುರಾದವು ನೆರೆಯ ತಿಪಟೂರು ತಾಲ್ಲೂಕಿನ ೧೭ ಕೆರೆಗಳ ಜತೆಗೆ ತಾಲ್ಲೂಕಿನ ಕಣಕಟ್ಟೆ ಹೋಬಳಿಯ ೫ ಕೆರೆಗಳಿಗೆ ಒಂದೇ ಕೊಳವೆ ಮೂಲಕ ನೀರು ಪೂರೈಕೆಗೆ ಅಂದಿನ ಸರ್ಕಾರ ಅನುಮೋದನೆ ನೀಡಿತ್ತು. ತಿಪಟೂರಿನ ೧೭ ಕೆರೆಗಳೊಂದಿಗೆ ನಮ್ಮ ೫ ಕೆರೆಗಳನ್ನು ಸೇರಿಸಿದರೆ ನಮಗೆ ನೀರು ಬರುವುದು ಅಸಾಧ್ಯ ಎಂದು ಕೂಡಲೇ ಎಚ್ಚೆತ್ತ ನಾನು ಅಂದಿನ ನೀರಾವರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರ ಮನವೊಲಿಸಿ ಕಣಕಟ್ಟೆ ಹೋಬಳಿಯ ೫ ಕೆರೆಗಳಿಗೆ ಪ್ರತ್ಯೇಕವಾಗಿ ಕೊಳವೆ ಪೈಪ್ ಅಳವಡಿಸಿದ್ದರಿಂದ ಇಂದು ನಮ್ಮ ೫ ಕೆರೆಗಳ ಒಡಲನ್ನು ಹೇಮಾವತಿ ತುಂಬಿದ್ದು ವೈಯಕ್ತಿಕವಾಗಿ ನನಗೆ ಮನತುಂಬಿ ಬಂದಿದೆ. ಅಲ್ಲದೆ ಈ ಭಾಗದ ಜನತೆಯ ಹರ್ಷಕ್ಕೆ ಕಾರಣವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯರಾದ ಮಾಡಾಳು ಸ್ವಾಮಿ, ವತ್ಸಲಾ ಶೇಖರಪ್ಪ,ತಾ. ಪಂ. ಸದಸ್ಯೆ ವನಜಾ ಪ್ರಕಾಶ್, ತಾ. ಪಂ. ಮಾಜಿ ಅಧ್ಯಕ್ಷ ನಂಜುಂಡಪ್ಪ, ಮುಖಂಡರಾದ ಪ್ರಕಾಶ್, ಮೈಲಾರಪ್ಪ, ಸುರೇಶ್, ಮಾಡಾಳು ಶಿವಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.