ಮಾಜಿ ಸಿಎಂ ಹೆಚ್‌ಡಿಕೆ ಬೆಂಗಾವಲು ವಾಹನ ಅಪಘಾತ: ೩ ಪೊಲೀಸರಿಗೆ ಗಾಯ

ಕುಣಿಗಲ್, ಆ. ೨- ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದ್ದು, ಮೂವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ತಿಪ್ಪೂರು ಗೇಟ್ ಬಳಿ ತಡರಾತ್ರಿ ನಡೆದಿದೆ.
ಪೋಲಿಸ್ ಸಿಬ್ಬಂದಿಗಳಾದ ಮಹೇಶ್, ಮಂಜುನಾಥ್ ಹಾಗೂ ಆನಂದ್ ಎಂಬುವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಮಂಗಳೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಬೆಂಗಾವಲು ವಾಹನ ಮಾರ್ಗಮಧ್ಯೆ ತಿಪ್ಪೂರು ಗೇಟ್ ಬಳಿ ರಸ್ತೆಯ ತಡೆಗೋಡೆಗೆ ಗುದ್ದಿ ರಸ್ತೆಯಿಂದಾಚೆಗೆ ನುಗ್ಗಿದೆ. ಪರಿಣಾಮ ವಾಹನದಲ್ಲಿದ್ದ ಐವರ ಪೈಕಿ ಮೂವರು ಗಾಯಗೊಂಡಿದ್ದು, ಗಾಯಾಳುಗಳನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಸುದ್ದಿ ತಿಳಿದ ಕೂಡಲೇ ಅಮೃತ್ತೂರು ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.