ಮಾಜಿ ಸಿಎಂ ಸಿದ್ದುರವರಿಂದ ವೈದ್ಯರಿಗೆ ತರಾಟೆ

ಚಾಮರಾಜನಗರ.ಮೇ.04. ನೆನ್ನೆ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜûನ್ ಕೊರತೆಯಿಂದಾಗಿ 24 ಮಂದಿ ಸಾವನ್ನಪ್ಪಿರುವ ಧಾರುಣ ಘಟನೆಯನ್ನು ಪರಿಶೀಲಿಸುವ ಸಲುವಾಗಿ ಇಂದು ಬೆಳಿಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಅವರು ಜಿಲ್ಲಾಸ್ಪತ್ರೆಯ ಡೀನ್ ಡಾ. ಸಂಜೀವ್‍ರೆಡ್ಡಿರವರಿಗೆ ನಿಮ್ಮ ಆಸ್ಪತ್ರೆಯಲ್ಲಿ ಎಷ್ಟು ಹಾಸಿಗೆಗಳಿವೆ? ಹಾಗೂ ಎಷ್ಟು ಹಾಸಿಗೆಗಳಿಗೆ ವೆಂಟಿಲೇಟರ್ ಸೌಲಭ್ಯ ಕಲ್ಪಿಸಲಾಗಿದೆ? ಸೇರಿದಂತೆ ಇನ್ನಿತರೆ ಸಮಸ್ಯೆಗಳ ಬಗ್ಗೆ ಪ್ರಶ್ನೆಯನ್ನು ಕೇಳಿದರು.
ಈ ಪ್ರಶ್ನೆಗಳಿಗೆ ಡಾ|| ಸಂಜೀವ್‍ರೆಡ್ಡಿ, ನಮ್ಮ ಆಸ್ಪತ್ರೆಯಲ್ಲಿ 53 ಹಾಸಿಗೆಗಳಿದ್ದು, ಇವುಗಳಲ್ಲಿ 34ಕ್ಕೆ ವೆಂಟಿಲೇಟರ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಡಬಡದಿಂದ ಉತ್ತರಿಸಿದರು. ಇದನ್ನು ಆಲಿಸಿದ ಸಿದ್ದುರವರು ಉಳಿದ ಹಾಸಿಗೆಗಳಿಗೆ ಏಕೆ ವೆಂಟಿಲೇಟರ್ ಸೌಲಭ್ಯ ಕಲ್ಪಿಸಿಲ್ಲ. ಆಸ್ಪತ್ರೆಯಲ್ಲಿ ಇನ್ನೂ ಹಲವಾರು ಸಮಸ್ಯೆಗಳಿಗೆ ಅದನ್ನು ಪರಿಹರಿಸಲು ಏನೇನು ಕ್ರಮ ಕೈಗೊಂಡಿರುವಿರಿ ಎಂದು ಏರು ಧ್ವನಿಯಲ್ಲಿಯೇ ಸಂಜೀವ್‍ರೆಡ್ಡಿರವರನ್ನು ತರಾಟೆಗೆ ತೆಗೆದುಕೊಂಡ ಹಿನ್ನಲೆ ನಿಮ್ಮ ಆಸ್ಪತ್ರೆಯಲ್ಲಿರುವ ಇನ್ನೂ ಹಲವಾರು ಸಮಸ್ಯೆಗಳನ್ನು ನಮ್ಮಿಂದ ಮುಚ್ಚಿಡುತ್ತಿರುವಿರಿ.
ಇದಕ್ಕೆ ಬದಲಾಗಿ ಆ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತಂದರೆ ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಬಹುದಲ್ಲವೇ ಎಂದು ಬೇಸರದಿಂದ ಸಿದ್ದು ನುಡಿದರು.
ಈ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ಆರ್. ಧೃವನಾರಾಯಣ್, ಡಿಹೆಚ್‍ಒ ಡಾ. ಎಂ.ಸಿ. ರವಿ ಸೇರಿದಂತೆ ಇನ್ನಿತರ ವೈದ್ಯರು ಇದ್ದರು.