ಮಾಜಿ ಸಿಎಂ ನಾಯ್ಡುಗೆ ಮಧ್ಯಂತರ ಜಾಮೀನು

ಹೈದರಾಬಾದ್, ಅ. ೩೧-ಕೌಶಲ್ಯ ಅಭಿವೃದ್ಧಿ ಹಗರಣದಲ್ಲಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ತಿ ಹಾಗೂ ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಅವರಿಗೆ ಹೈಕೋರ್ಟ್ ಇಂದು ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ಜಾಮೀನಿನ ಅವಧಿ ಮುಂದಿನ ನಾಲ್ಕು ವಾರಗಳವರೆಗೆ ಮಾತ್ರ ಇರಲಿದೆ.
ವೈದ್ಯಕೀಯ ಚಿಕಿತ್ಸೆಗಾಗಿ ಜಾಮೀನು ಕೋರಿ ನಾಯ್ಡು ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್ ತೀರ್ಪನ್ನು ಇಂದಿಗರ ಕಾಯ್ದಿರಿಸಿತ್ತು. ನ್ಯಾಯಮೂರ್ತಿ ತಲ್ಲಪ್ರಗಡ ಮಲ್ಲಿಕಾರ್ಜುನ ರಾವ್ ಅವರು ಇಂದು ತೀರ್ಪು ಪ್ರಕಟಿಸಿದ್ದು, ೪ ವಾರಗಳ ಕಾಲ ಜಾಮೀನನ್ನು ಮಂಜೂರು ಮಾಡಿದ್ದಾರೆ.
ಈ ಹಿಂದೆ ಜಾಮೀನು ಕೋರಿ ಚಂದ್ರಬಾಬು ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಎಸಿಬಿ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿತ್ತು. ಹೀಗಾಗಿ ಜಾಮೀನು ಕೋರಿ ಹೈಕೋರ್ಟಿಗೆ ಮೊರೆ ಹೋಗಿದ್ದರು. ಈಗ ನಾಯ್ಡು ಅವರಿಗೆ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.
ಕೋರ್ಟ್? ಜಾಮೀನು ನೀಡಿದ ಬಳಿಕ ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ನಾಯ್ಡು ಪರ ವಕೀಲರು, ಚಂದ್ರಬಾಬು ಅವರ ಆರೋಗ್ಯದ ದೃಷ್ಟಿಯಿಂದ ಜಾಮೀನು ನೀಡಲಾಗಿದೆ. ಕಳೆದ ೫೦ ದಿನಗಳಿಂದ ಜೈಲಿನಲ್ಲಿರುವ ಬಾಬು ಅವರು ವೈದ್ಯಕೀಯ ತಪಾಸಣೆಗೆ ಒಳಗಾಗಲಿದ್ದಾರೆ ಎಂದು ತಿಳಿಸಿದರು.
ಕೌಶಲ್ಯಾಭಿವೃದ್ಧಿ ಹಗರಣ ಆರೋಪ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರು ಕೆಲ ದಿನಗಳ ಹಿಂದೆ ಎಸಿಬಿ ನ್ಯಾಯಾಲಯದ ನ್ಯಾಯಾಧೀಶರಿಗೆ ಪತ್ರ ಬರೆದು, ತಮ್ಮ ಹತ್ಯೆಗೆ ಎಡಪಂಥೀಯ ಉಗ್ರಗಾಮಿಗಳು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದ್ದರು