ಮಾಜಿ ಸಚಿವ ಸಿ.ಎಂ.ಉದಾಸಿ ಅಗಲಿಕೆಗೆ ಸಂತಾಪ

ಬಾಳೆಹೊನ್ನೂರು.ಜೂ.೯; ಸರಳ ಸಜ್ಜನಿಕೆಗೆ ಹೆಸರಾದ ಮಾಜಿ ಸಚಿವ ಹಾಗೂ ಹಾಲಿ ಹಾನಗಲ್ಲ ಕ್ಷೇತ್ರದ ಶಾಸಕ ಸಿ.ಎಂ. ಉದಾಸಿಯವರ ಅಗಲಿಕೆಗೆ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.  ಮುತ್ಸದ್ದಿ ರಾಜಕಾರಣಿಯಾಗಿದ್ದ ಸಿ.ಎಂ. ಉದಾಸಿ ಅವರು 6 ಸಲ ಹಾನಗಲ್ಲ ವಿಧಾನ ಸಭಾ ಮತಕ್ಷೇತ್ರದಿಂದ ಆಯ್ಕೆಗೊಂಡು ಮುಖ್ಯ ಮಂತ್ರಿ ಜೆ.ಎಚ್.ಪಟೇಲ್ ಅವರ ಸಚಿವ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿ ಮತ್ತೆ ಜೆ.ಡಿಎಸ್.- ಬಿ.ಜೆ.ಪಿ. ಸಮಿಶ್ರ ಸರ್ಕಾರದ ಹೆಚ್.ಡಿ. ಕುಮಾರಸ್ವಾಮಿಯವರ ನೇತೃತ್ವದ ಸಚಿವ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಖಾತೆ ಸಚಿವರಾಗಿ ರಾಜ್ಯಕ್ಕೆ ಉತ್ತಮವಾದ ಸೇವೆ ಸಲ್ಲಿಸಿದ್ದನ್ನು ಮರೆಯಲಾಗದು. ಯಾವಾಗಲೂ ಕ್ರಿಯಾಶೀಲರಾಗಿ ಹಲವಾರು ಚಿಂತನ ಪರವಾದ ಸಾಮಾಜಿಕ ಕಾರ್ಯಗಳನ್ನು ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಶ್ರೀ ರಂಭಾಪುರಿ ಪೀಠದೊಂದಿಗೆ ನಿಕಟ ಸಂಬAಧ ಹೊಂದಿ ಹಲವಾರು ಧಾರ್ಮಿಕ ಸಮಾರಂಭಗಳಲ್ಲಿ ಪಾಲ್ಗೊಂಡ ನೆನಪುಗಳನ್ನು ಸ್ಮರಿಸಬಹುದು. ತಮ್ಮ 85ನೇ ವಯಸ್ಸಿನಲ್ಲಿ ಶಿವೈಕ್ಯರಾದ ಅವರಿಗೆ ಪರಮಾತ್ಮ ಚಿರಶಾಂತಿಯಿತ್ತು ಅವರ ಅಗಲಿಕೆಯಿಂದ ಉಂಟಾದ ದು:ಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಅವರ ಕುಟುಂಬ ವರ್ಗಕ್ಕೂ ಮತ್ತು ಅವರ ಅಭಿಮಾನಿಗಳಿಗೂ ಕೊಡಲೆಂದು ತಮ್ಮ ಸಂತಾಪದಲ್ಲಿ ವ್ಯಕ್ತಪಡಿಸಿದ್ದಾರೆ.