ಮಾಜಿ ಸಚಿವ, ಶಾಸಕ ಸಿ.ಎಂ.ಉದಾಸಿ ನಿಧನ-ಗಣ್ಯರ ಸಂತಾಪ

ಹಾವೇರಿ:ಜೂ.9: ನಾಡಿನ ಹಿರಿಯ ಮುತ್ಸದ್ದಿ ರಾಜಕಾರಣಿ ಮಾಜಿ ಸಚಿವರು ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಚನ್ನಬಸಪ್ಪ ಮಹಾಲಿಂಗಪ್ಪ ಉದಾಸಿ(ಸಿ.ಎಂ.ಉದಾಸಿ)(85) ಅವರು ಮಂಗಳವಾರ ನಿಧನರಾದರು.
ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ವಯೋಸಹಜ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಜೂನ್ 8ರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದು, ಪತ್ನಿ, ಪುತ್ರಿ ಹಾಗೂ ಪುತ್ರ ಸಂಸದ ಶಿವಕುಮಾರ ಉದಾಸಿ ಸೇರಿ ಅಪಾರ ಬಂಧು-ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.
ಸಿ.ಎಂ.ಉದಾಸಿ ಅವರ ನಿಧನಕ್ಕೆ ಮುಖ್ಯಮಂತ್ರಿಗಳು, ಗೃಹ ಸಚಿವರು, ವಾರ್ತಾ ಸಚಿವರು, ಕೃಷಿ ಸಚಿವರು ಸೇರಿದಂತೆ ನಾಡಿನ ಹಲವು ಗಣ್ಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
1937 ಫೆಬ್ರುವರಿ 2 ರಂದು ಸಾವಿತ್ರಮ್ಮ ಮಹಾಲಿಂಗಪ್ಪನವರ ದಂಪತಿಗಳ ಮಗನಾಗಿ ಜನಿಸಿದ ಅವರು 1974ರಲ್ಲಿ ಪುರಸಭೆ ಸದಸ್ಯರಾಗಿ ರಾಜಕೀಯ ಪ್ರವೇಶಮಾಡಿ ನಂತರ ಪುರಸಭೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. 1983ರಲ್ಲಿ ಹಾನಗಲ್ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಗೊಂಡು ಮೊದಲಬಾರಿಗೆ ಶಾಸಕರಾದರು. ರಾಮಕೃಷ್ಣ ಹೆಗಡೆ ಅವರ ಸರ್ಕಾರದಲ್ಲಿ ಕರ್ನಾಟಕ ರಾಜ್ಯ ಅರಣ್ಯ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡರು. 1985ರ ವಿಧಾನಸಭಾ ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡನೇ ಬಾರಿಗೆ ಶಾಸಕರಾದರು. 1989 ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡರೂ 1994ರ ಚುನಾವಣೆಯಲ್ಲಿ ಪುನಃ ಆಯ್ಕೆಗೊಂಡು ಜನತಾದಳದ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿ ಕಾರ್ಯನಿರ್ವಹಿಸಿದರು. 1999ರ ಚುನಾವಣೆಯಲ್ಲಿ ಸೋಲುಂಡ ಅವರು ನಂತರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು 2004ರ ಚುನಾವಣೆಯಲ್ಲಿ ಪುನಃ ಆಯ್ಕೆಗೊಂಡರು. ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವರಾಗಿ, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದರು. 2013ರಲ್ಲಿ ಸೋಲನ್ನು ಅನುಭವಿಸಿದ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಪುನಃ ಆಯ್ಕೆಗೊಂಡು ಪ್ರಸ್ತುತ ಶಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ರಾಜ್ಯದ ಹಿರಿಯ ಮುತ್ಸದ್ದಿ ರಾಜಕಾರಣಿಗಲ್ಲಿ ಒಬ್ಬರಾಗಿದ್ದ ಸಿ.ಎಂ.ಉದಾಸಿ ಅವರನ್ನು ಅಣ್ಣಾವ್ರು ಎಂದೇ ಅಭಿಮಾನಿಗಳು ಕರೆಯುತ್ತಿದ್ದರು. ಕ್ಷೇತ್ರದ ಅಭಿವೃದ್ಧಿಯೊಂದಿಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕ್ರಿಯಾಶೀಲವಾಗಿ ಶ್ರಮಿಸುತ್ತಿದ್ದರು.
ಲೋಕೋಪಯೋಗಿ ಸಚಿವರಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ನಿರ್ಮಾಣವಾಗಿರುವ ವಾರ್ತಾ ಇಲಾಖೆ ಕಟ್ಟಡಗಳಲ್ಲಿ ಅತ್ಯಂತ ಭವ್ಯಕಟ್ಟಡವಾಗಿ ಹಾವೇರಿ ವಾರ್ತಾ ಕಚೇರಿ ಕಟ್ಟಡ ನಿರ್ಮಾಣಕ್ಕೆ ಕಾರಣಿಕರ್ತರಾಗಿದ್ದಾರೆ ಹಾಗೂ ಪತ್ರಕರ್ತರಿಗಾಗಿ ಪ್ರತ್ಯೇಕ “ಜಿಲ್ಲಾ ಪತ್ರಿಕಾ ಭವನ” ಸಿ.ಎಂ.ಉದಾಸಿ ಅವರ ಕಾಲಾವಧಿಯಲ್ಲಿ ನಿರ್ಮಾಣವಾಗಿದ್ದು ನೆನೆಯಬಹುದು.
ವಾವಿ ಸಂ
ಸಚಿವ ಬೊಮ್ಮಾಯಿ ಸಂತಾಪ
ಮಾಜಿ ಸಚಿವ, ಹಾನಗಲ್ ಕ್ಷೇತ್ರದ ಶಾಸಕರಾಗಿದ್ದ ರಾಜ್ಯ ಬಿಜೆಪಿಯ ಹಿರಿಯ ಮುಖಂಡರಾದ ಸಿ.ಎಂ.ಉದಾಸಿ ಅವರ ನಿಧನಕ್ಕೆ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ದಿಗ್ಭ್ರಾಂತಿ ವ್ಯಕ್ತಪಡಿಸಿದ್ದಾರೆ.
ಸಿ.ಎಂ.ಉದಾಸಿ ಅವರು ರಾಜ್ಯ ರಾಜಕಾರಣದ ಹಿರಿಯ ನಾಯಕರು. ಅವರಿಗೆ ಆಡಳಿತದಲ್ಲಿ ಅಪಾರ ಅನುಭವ ಇತ್ತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹತ್ತಿರದವರಾಗಿದ್ದರು. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಲೋಕೋಪಯೋಗಿ ಖಾತೆಗಳನ್ನು ಉದಾಸಿ ಅವರು ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಉದಾಸಿ ಅವರು ಏಳು ಭಾಷೆಗಳನ್ನು ಬಲ್ಲ ಧೀಮಂತ ನಾಯಕ. ಅಂಥ ಮುತ್ಸದ್ದಿ ನಾಯಕನನ್ನು ಕಳೆದುಕೊಂಡು ರಾಜ್ಯ ಈಗ ಬಡವಾಗಿದೆ. ಇದರಿಂದ ಕರ್ನಾಟಕ ಮತ್ತು ರಾಜ್ಯ ರಾಜಕಾರಣಕ್ಕೆ ತುಂಬಲಾರದ ಹಾನಿಯಾಗಿದೆ ಎಂದು ಬಸವರಾಜ ಬೊಮ್ಮಾಯಿ ಅವರು ಕಂಬನಿ ಮಿಡಿದಿದ್ದಾರೆ.
ವೈಯಕ್ತಿಕವಾಗಿ ಸಿ.ಎಂ.ಉದಾಸಿ ಅವರು ನನಗೆ ಗುರುಗಳು ಹಾಗೂ ಮಾರ್ಗದರ್ಶಕರು. ಅಂಥವರನ್ನು ಕಳೆದುಕೊಂಡಿರುವುದಕ್ಕೆ ನನಗೆ ಬಹಳ ದುಃಖವಾಗಿದೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಸಚಿವ ಸಿ.ಸಿ.ಪಾಟೀಲ್ ಶೋಕ
ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರೂ ಹಾಗೂ ಲೋಕೋಪಯೋಗಿ ಖಾತೆಯ ಮಾಜಿ ಸಚಿವರೂ ಆದ ಸಿ.ಎಂ. ಉದಾಸಿ ಅವರ ನಿಧನಕ್ಕೆ ಸಣ್ಣ ಕೈಗಾರಿಕಾ ಹಾಗೂ ವಾರ್ತಾ ಸಚಿವ ಸಿ.ಸಿ ಪಾಟೀಲ್ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಸಿ.ಎಂ.ಉದಾಸಿ ಅವರು ಲೋಕೋಪಯೋಗಿ ಇಲಾಖಾ ಸಚಿವರಾಗಿದ್ದ ಸಂದರ್ಭದಲ್ಲಿ ರಾಜ್ಯದೆಲ್ಲೆಡೆ ವಿಶೇಷವಾಗಿ ರಸ್ತೆಗಳು ಮತ್ತು ಸೇತುವೆಗಳ ನಿರ್ಮಾಣ ಮತ್ತು ಸುಧಾರಣೆಗೆ ಕೈಗೊಂಡ ಕ್ರಮಗಳು ಅನುಕರಣೀಯ ಮತ್ತು ಅಭಿನಂದನೀಯ ಎಂಬ ಪ್ರಶಂಸೆಗಳ ಸುರಿಮಳೆಯನ್ನೇಗಳಿಸಿದ್ದರು ಎಂದು ಸಿ.ಸಿ. ಪಾಟೀಲ್ ಅವರು ಬಣ್ಣಿಸಿದ್ದಾರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಹಾವೇರಿ ಜಿಲ್ಲೆಯಲ್ಲಿ ಅತ್ಯದ್ಬುತ ಕಟ್ಟಡವನ್ನು ನಿರ್ಮಿಸಿಕೊಟ್ಟ ಕೀರ್ತಿ ಚನ್ನಬಸಪ್ಪ ಮಹಾಲಿಂಗಪ್ಪ ಉದಾಸಿ ಅವರಿಗೆ ಸಲ್ಲಬೇಕು ಎಂದು ಸಿ.ಸಿ. ಪಾಟೀಲ್ ಹೇಳಿದ್ದಾರೆ.

ಸಿ.ಎಂ. ಉದಾಸಿ ಅವರ ಆತ್ಮಕ್ಕೆ ಶಾಂತಿ ಲಭಿಸಲಿ ಹಾಗೂ ಹಾವೇರಿ ಸಂಸದ ಶಿವಕುಮಾರ್ ಉದಾಸಿ ಅವರನ್ನೂ ಒಳಗೊಂಡಂತೆ, ಉದಾಸಿ ಅವರ ಕುಟುಂಬಕ್ಕೆ ಶ್ರೀಯುತರ ಅಗಲಿಕೆಯಿಂದ ಉಂಟಾಗಿರುವ ಭರಿಸಲಾಗದ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಸಿ.ಸಿ. ಪಾಟೀಲ್ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಡಿಸಿಎಂ ಕಾರಜೋಳ ತೀವ್ರ ಸಂತಾಪ
ಹಿರಿಯ ಶಾಸಕರು ಹಾಗೂ ಮಾಜಿ ಸಚಿವರಾದ ಸಿ.ಎಂ.ಉದಾಸಿ ಅವರ ನಿಧನಕ್ಕೆ ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ ಕಾರಜೋಳ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಸಿ.ಎಂ.ಉದಾಸಿಯವರು ಸರಳ ಸಜ್ಜನಿಕೆಯ ವ್ಯಕ್ತಿತ್ವ ಉಳ್ಳ ಕ್ರಿಯಾಶೀಲ ರಾಜಕಾರಣಿ. ಈ ಹಿಂದೆ ಲೋಕೋಪಯೋಗಿ ಸಚಿವರಾಗಿಯೂ ಅತ್ಯಂತ ಉತ್ತಮವಾದ ಕಾರ್ಯನಿರ್ವಹಿಸಿದ್ದಾರೆ. ರಾಜ್ಯದ ಅಭಿವೃದ್ಧಿ ಪರ ಚಿಂತಕರಾಗಿದ್ದ ಅವರು ಜನಪ್ರಿಯ ನಾಯಕರಾಗಿದ್ದರು. ಅವರ ನಿಧನದಿಂದ ಅಪರೂಪದ ಸಜ್ಜನಿಕೆಯ ನೇತಾರರೊಬ್ಬರನ್ನು ರಾಜ್ಯ ಕಳೆದುಕೊಂಡಂತಾಗಿದೆ.
ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಿ, ಅವರ ಕುಟುಂಬದವರಿಗೆ ಅಭಿಮಾನಿ ಬಳಗಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಡಿಸಿಎಂ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಸಚಿವ ಬಿ.ಸಿ.ಪಾಟೀಲ ಶೋಕ
ಹಾವೇರಿ ಜಿಲ್ಲೆಯ ಹಾಗೂ ಬಿಜೆಪಿ ಪಕ್ಷದ ಹಿರಿಯ ಸರಳ ಸಜ್ಜನಿಕೆಯ ರಾಜಕಾರಣಿ ಸಿ.ಎಂ.ಉದಾಸಿ ಅವರ ನಿಧನ ರಾಜ್ಯಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಶೋಕ ವ್ಯಕ್ತಪಡಿಸಿದ್ದಾರೆ.
ಹಾನಗಲ್‍ನಲ್ಲಿ ಅಣ್ಣಾ ಎಂದೇ ಸಂಬೋಧಿಸಲ್ಪಡುತ್ತಿದ್ದ ರೈತಾಪಿ ಕುಟುಂಬದಿಂದ ಬಂದಿದ್ದಂತಹ ಉದಾಸಿಯವರು ಉತ್ತಮ ರಾಜಕಾರಣಿಯಷ್ಟೇ ಅಲ್ಲದೇ ಮಾರ್ಗದರ್ಶಕರೂ ಸ್ನೇಹಶೀಲರೂ ಆಗಿದ್ದರು. ಶ್ರೀಯುತರ ನಿಧನ ಪಕ್ಷಕ್ಕೂ ಹಾವೇರಿ ಜಿಲ್ಲೆಗೂ ರಾಜ್ಯಕಾರಣಕ್ಕೂ ತುಂಬಲಾರದ ನಷ್ಟವನ್ನುಂಟುಮಾಡಿದೆ. ಮೃತರ ಆತ್ಮಕ್ಕೆ ಆ ಭಗವಂತ ಸದ್ಗತಿ ನೀಡಲಿ.ಅಭಿಮಾನಿಗಳಿಗೂ ಅವರ ಕುಟುಂಬದ ಸದಸ್ಯರಿಗೂ ದುಃಖಭರಿಸುವ ಶಕ್ತಿನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಶೋಕ ಸಂಸದೇಶದಲ್ಲಿ ತಿಳಿಸಿದ್ದಾರೆ.