ಮಾಜಿ ಸಚಿವ ವಿನಯ್ ಸಿಬಿಐ ವಶಕ್ಕೆ

ಹುಬ್ಬಳ್ಳಿ, ನ ೫: ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್‌ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳ ತಂಡ ಇಂದು ಬೆಳಿಗ್ಗೆ ಮಾಜಿ ಸಚಿವ ವಿನಯ್ ಕುಲಕರ್ಣಿ ಹಾಗೂ ಅವರ ಸಹೋದರ ವಿಜಯ್ ಕುಲಕರ್ಣಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತು.
ಇಂದು ಬೆಳ್ಳಂಬೆಳಗ್ಗೆ ಸುಮಾರು ೬-೧೫ ಗಂಟೆಗೆ ಸಿಬಿಐ ಅಧಿಕಾರಿಗಳು ಧಾರವಾಡದ ಶಿವಗಿರಿ ಬಾರಾಕುಟ್ರಿಯಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ನಿವಾಸ ಭೇಟಿ ನೀಡಿ ವಿನಯ್ ಅವರನ್ನು ವಶಕ್ಕೆ ಪಡೆದು, ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ಕರೆದೊಯ್ದು ತೀವ್ರ ವಿಚಾರಣೆ ನಡೆಸಿದರು. ಈಗ ಅವರಿಗೆ ಬಂಧನದ ಭೀತಿ ಎದುರಾಗಿದೆ.
ಏಕಕಾಲಕ್ಕೆ ವಿನಯ್ ಕುಲಕರ್ಣಿ ಸಹೋದರ ವಿಜಯ್ ಕುಲಕರ್ಣಿ ಅವರನ್ನೂ ಸಹ ಹುಬ್ಬಳ್ಳಿಯ ವಿದ್ಯಾನಗರ ಪ್ರಗತಿ ಕಾಲೊನಿಯಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿದ ಸಿಬಿಐ ಅಧಿಕಾರಿಗಳು, ಅವರನ್ನು ವಶಕ್ಕೆ ಪಡೆದು ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು.
ಮಾಜಿ ಸಚಿವ ವಿನಯ್ ನಿವಾಸಕ್ಕೆ ಬೆಳ್ಳಂಬೆಳಗ್ಗೆ ಭೇಟಿ ನೀಡಿದ ಸಿಬಿಐ ಅಧಿಕಾರಿಗಳು ಯೋಗೀಶ್‌ಗೌಡ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ತನಿಖೆಗೆ ಹಾಜರಾಗುವಂತೆ ತಿಳಿಸಿದ ನಂತರ ತಮ್ಮ ಕಾರಿನಲ್ಲಿಯೇ ತೆರಳಿದ ವಿನಯ್ ಉಪನಗರ ಠಾಣೆಗೆ ಹಾಜರಾದರು.
ಯೋಗೀಶ್‌ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಹಾಗೂ ವಿಜಯ್ ಅವರನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದರು ಎನ್ಲಲಾಗಿದೆ.
ಅಲ್ಲದೆ ವಿನಯ್ ಹಾಗೂ ವಿಜಯ್‌ರಿಗೆ ಆಪ್ತರೆನ್ನಲಾದ ಶಿರೀಶ್ ಪಾಟೀಲ ಮತ್ತು ಉದ್ಯಮಿ ರೂಪೇಂದ್ರ ಅವರನ್ನು ಸಹ ಸಿಬಿಐ ಅಧಿಕಾರಿಗಳು ಠಾಣೆಗೆ ಕರೆತಂದು ವಿಚಾರಣೆ ನಡೆಸಿದರು.
ಮಾಜಿ ಸಚಿವ ವಿನಯ್ ಹಾಗೂ ವಿಜಯ್ ಅವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆಯುತ್ತಿದ್ದಂತೆ ನೂರಾರು ಜನ ಆಪ್ತರು ಹಾಗೂ ಕಾರ್ಯಕರ್ತರು ಉಪನಗರ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ ದೃಶ್ಯ ಕಂಡುಬಂತು. ಈ ಮಧ್ಯೆ ಠಾಣೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಯೋಗೀಶ್‌ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಈಗಾಗಲೇ ಆರು ಆರೋಪಿಗಳ ವಿರುದ್ಧ ಎಫ್.ಐ.ಆರ್ ದಾಖಲಿಸಿದೆ. ಆರೋಪಿಗಳಾದ ಬಸವರಾಜ, ಶಿವಪ್ಪ, ವಿಕ್ರಮ ಬಳ್ಳಾರಿ, ಕೀರ್ತಿ ಕುಮಾರ ಕುರಹಟ್ಟಿ, ಸಂದೀಪ ಸವದತ್ತಿ, ವಿನಾಯಕ ಕಾಟಗಿ ಹಾಗೂ ಮಹಾಬಲೇಶ್ವರ ಹೊನಗಲ್ ವಿರುದ್ಧ ಪ್ರಕರಣ ದಾಖಲಾಗಿದೆ.
೨೦೧೬ ಜೂನ್ ೧೫ ರಂದು ಜಿ.ಪಂ ಸದಸ್ಯ ಯೋಗೀಶ್‌ಗೌಡನ ಕೊಲೆಯಾಗಿತ್ತು. ಅಂದು ಬೆಳಿಗ್ಗೆ ಧಾರವಾಡ ನಗರದ ಸಪ್ತಾಪುರ ಜಿಮ್‌ಗೆ ನುಗ್ಗಿದ ದುಷ್ಕರ್ಮಿಗಳು ಯೋಗೀಶ್‌ಗೌಡನನ್ನು ಮಚ್ಚಿನಿಂದ ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ದೃಶ್ಯವು ಜಿಮ್ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಈ ದೃಶ್ಯಗಳನ್ನು ಆಧರಿಸಿ ಪೊಲೀಸರು ಮಾಜಿ ಸಚಿವ, ಸ್ಥಳೀಯ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಐವರನ್ನು ಬಂಧಿಸಿದ್ದರು. ಹೀಗಾಗಿ ಕೊಲೆಯ ಹಿಂದೆ ವಿನಯ್ ಕುಲಕರ್ಣಿ ಅವರ ಕೈವಾಡವಿದೆ ಎಂಬ ಆರೋಪ ಕೇಳಿ ಬಂದಿತ್ತು.
ಪ್ರಕರಣದಲ್ಲಿ ವಿನಯ್ ಕುಲಕರ್ಣಿಯವರ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಆರೋಪಿಗಳು ಯೋಗೀಶ್‌ಗೌಡನ ಸಹೋದರ ಗುರುನಾಥಗೌಡನ ಜೊತೆ ರಾಜಿ ಮಾಡಿಕೊಳ್ಳಲು ಮುಂದಾಗಿದ್ದರು ಎನ್ನಲಾಗಿತ್ತು. ಇತ್ತ ವಿನಯ್ ಕುಲಕರ್ಣಿ ಅವರ ಹೆಸರನ್ನು ಕೈಬಿಡಲು ಅಧಿಕಾರಿಗಳು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಯೋಗೀಶ್‌ಗೌಡನ ತಾಯಿ ಆರೋಪಿಸಿದ್ದರು.
ಅಲ್ಲದೆ ಯೋಗೀಶ್‌ಗೌಡ ಕೊಲೆಯಾದ ನಂತರ ಅವರ ಪತ್ನಿ ಮಲ್ಲಮ್ಮ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಅಚ್ಚರಿಯನ್ನು ಮೂಡಿಸಿದ್ದರು.
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಈಗ ಮಾಜಿ ಸಚಿವ ವಿನಯ್ ಕುಲಕರ್ಣಿ ಹಾಗೂ ಸಹೋದರ ವಿಜಯ್ ಕುಲಕರ್ಣಿ ಅವರನ್ನು ಬಂಧಿಸಿರುವ ಸಿಬಿಐ ಅಧಿಕಾರಿಗಳು ಮಹತ್ವದ ಮಾಹಿತಿಗಳನ್ನು ಕಲೆಹಾಕಿದ್ದು, ಯೋಗೀಶ್‌ಗೌಡ ಕೊಲೆ ಪ್ರಕರಣ ಈಗ ಹೊಸ ತಿರುವು ಪಡೆದಿಕೊಂಡಿದೆ.