ಮಾಜಿ ಸಚಿವ ರೇವಣ್ಣ ಎಸ್‌ಐಟಿ ಕಸ್ಟಡಿಗೆ

ಬೆಂಗಳೂರು,ಮೇ.5-ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ಎಚ್.‌ಡಿ. ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ( ಎಸ್‌ಐಟಿ)ದ ಕಸ್ಟಡಿಗೆ ನೀಡಿ 17ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಕೋರ್ಟ್‌ ರಜೆ ಇರುವ ಹಿನ್ನೆಲೆಯಲ್ಲಿ ಅಪಹರಣ ಪ್ರಕರಣದ ಪ್ರಮುಖ ಆರೋಪಿ ಎಚ್.ಡಿ. ರೇವಣ್ಣ ಅವರನ್ನು ಇಂದು ಸಂಜೆ ಕೋರಮಂಗಲದಲ್ಲಿರುವ 17ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರ ನಿವಾಸಕ್ಕೆ ಕರೆತರಲಾಗಿತ್ತು. ಜಡ್ಜ್‌ ಮುಂದೆ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಹಾಜರುಪಡಿಸಿದರು. ಈ ವೇಳೆ ಎಸ್‌ಐಟಿ ಪರ ವಕೀಲರು, ಪ್ರಕರಣದ ತೀವ್ರತೆಯನ್ನು ವಿವರಿಸಿ ರೇವಣ್ಣ ಅವರನ್ನು ಕಸ್ಟಡಿಗೆ ಕೊಡುವಂತೆ ಮನವಿ ಮಾಡಿದರು. ಆದರೆ, ಇದಕ್ಕೆ ರೇವಣ್ಣ ಪರ ವಕೀಲರಾದ ಮೂರ್ತಿ ಡಿ. ನಾಯಕ್‌ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ, ಎಸ್‌ಐಟಿಯವರು ತಮ್ಮ ಕಕ್ಷಿದಾರರಿಗೆ ಕಿರುಕುಳವನ್ನು ನೀಡುತ್ತಿದ್ದಾರೆ. ಅವರಿಗೆ ಆರೋಗ್ಯ ಸಮಸ್ಯೆಯಿದೆ ಎಂದು ವಾದವನ್ನು ಮಂಡಿಸಿದರು.
ಈ ವೇಳೆ ರಿಮೈಂಡ್‌ ಕಾಪಿ‌ಯನ್ನು ಎಸ್‌ಐಟಿ ಅಧಿಕಾರಿಗಳು ನ್ಯಾಯಾಧೀಶರಿಗೆ ಸಲ್ಲಿಕೆ ಮಾಡಿದ್ದಾರೆ. ಸುಮಾರು 15 ಅಂಶಗಳನ್ನು ಉಲ್ಲೇಖ ಮಾಡಿ 5 ದಿನಗಳ ಕಾಲ ಕಸ್ಟಡಿಗೆ ವಹಿಸುವಂತೆ ಕೋರಿದ್ದಾರೆ. ವಾದ – ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರಾದ ರವೀಂದ್ರ ಕುಮಾರ್ ಬಿ. ಕಟ್ಟಿಮನಿ ಅವರು, ಎಚ್‌.ಡಿ. ರೇವಣ್ಣ ಅವರನ್ನು ಎಸ್‌ಐಟಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ.
ಬಿಗಿ ಪೊಲೀಸ್ ಭದ್ರತೆ:
ಎಚ್.ಡಿ. ರೇವಣ್ಣ‌ ಪ್ರಭಾವಿ ನಾಯಕ ಹಾಗೂ ಶಾಸಕರಾಗಿರುವ ಕಾರಣ ಈಗಾಗಲೇ ಕೋರಮಂಗಲದ ನ್ಯಾಯಾಧೀಶರ ಮನೆ ಬಳಿ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು. ಮನೆಯ ಮುಂಭಾಗದಲ್ಲಿ ‌ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಭದ್ರತೆಯೊಂದಿಗೆ ಅವರನ್ನು ಜಡ್ಜ್‌ಗೆ ಹಾಜರುಪಡಿಸಲಾಯಿತು.
ರೇವಣ್ಣಗೆ ಮತ್ತೊಮ್ಮೆ ಮೆಡಿಕಲ್ ಟೆಸ್ಟ್
ನ್ಯಾಯಾಧೀಶರ ಮುಂದೆ ಎಚ್.ಡಿ. ರೇವಣ್ಣ ಅವರನ್ನು ಹಾಜರುಪಡಿಸುವ ಮುನ್ನ ಬೌರಿಂಗ್‌ ಆಸ್ಪತ್ರೆಯಲ್ಲಿ ಮತ್ತೊಮ್ಮೆ ವೈದ್ಯಕೀಯ ತಪಾಸಣೆ ಮಾಡಲಾಯಿತು. ಹೃದಯ ತಜ್ಞರು ಮತ್ತು ಗ್ಯಾಸ್ಟ್ರೋಎಂಟರಾಲಜಿಸ್ಟ್ ತಜ್ಞರ ಬಳಿ ತಪಾಸಣೆ ನಡೆಸಲಾಗಿದೆ.
ರಾಜಕೀಯ ಷಡ್ಯಂತ್ರ:
ಎಚ್‌.ಡಿ. ರೇವಣ್ಣ

ನನ್ನ ಮೇಲೆ ಅಪಹರಣ ಪ್ರಕರಣ ದಾಖಲಿಸಿದ್ದಾರೆ. 40 ವರ್ಷ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಯಾವುದೇ ರೀತಿಯ ಪುರಾವೆಗಳು ಇಲ್ಲದಿದ್ದರೂ ಅನಾವಶ್ಯಕವಾಗಿ ನನ್ನನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ನನ್ನ ವಿರುದ್ಧದ ಆರೋಪಗಳೆಲ್ಲವೂ ಸುಳ್ಳು. ಇದೊಂದು ದುರದ್ದೇಶಪೂರ್ವಕ ಬಂಧನವಾಗಿದೆ. ಯಾವುದೇ ಸಾಕ್ಷಿಗಳು ಸಹ ಇವರ ಬಳಿ ಇಲ್ಲ ಎಂದು ಎಚ್‌.ಡಿ. ರೇವಣ್ಣ ಹೇಳಿದ್ದಾರೆ.
ಎಸ್‌ಐಟಿ ಅಧಿಕಾರಿಗಳು ಮೆಡಿಕಲ್‌ ಟೆಸ್ಟ್‌ಗೆಂದು ಬೋರಿಂಗ್‌ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಎಚ್‌.ಡಿ. ರೇವಣ್ಣ ಏಪ್ರಿಲ್‌ 28ರಂದು ನಮ್ಮ ವಿರುದ್ಧ ಕೇಸ್‌ ದಾಖಲಿಸಿದರು. ಆಗ ನಮ್ಮ ಮೇಲೆ ಯಾವುದೇ ಸಾಕ್ಷಿಗಳು ಸಿಕ್ಕಿಲ್ಲವೆಂದು ಪುನಃ ಮೇ 2ರಂದು ನನ್ನ ಮೇಲೆ ಸಾಕ್ಷಿಗಳನ್ನು ಸೃಷ್ಟಿ ಮಾಡಿ ಸಿಕ್ಕಿ ಹಾಕಿಸಿದ್ದಾರೆ. ಇದರಲ್ಲಿ ಯಾವುದೇ ರೀತಿಯ ಪುರಾವೆಗಳು ಇಲ್ಲ. ಆದರೂ ನನ್ನನ್ನು ಸಿಕ್ಕಿ ಹಾಕಿಸಲಾಗಿದೆ ಎಂದು ಗುಡುಗಿದರು.


ಸಹಾಯವಾಣಿ ಆರಂಭ

ಸಂಸದ ಪ್ರಜ್ವಲ್ ರೇವಣ್ಣ ಭಾಗಿಯಾಗಿರುವ ಅಶ್ಲೀಲ ವಿಡಿಯೋದಲ್ಲಿನ ಸಂತ್ರಸ್ತೆಯರ ನೆರವಿಗಾಗಿ ವಿಶೇಷ ತನಿಖಾ ತಂಡ(ಎಸ್ ಐಟಿ) ಸಹಾಯವಾಣಿ ತೆರೆದಿದೆ. ಯಾರೇ ಸಂತ್ರಸ್ತರು ಹಾಗೂ ಭಾತ್ಮೀದಾರಿದ್ದಲ್ಲಿ ಅವರಿಗೆ ಕಾನೂನು ನೆರವು, ರಕ್ಷಣೆ ಹಾಗೂ ಇನ್ನಿತರ ಯಾವುದೇ ಸಹಾಯ ಬೇಕಾಗಿದ್ದಲ್ಲಿ ಸಹಾಯವಾಣಿ ಸಂಖ್ಯೆ 6360938947 ಕರೆ ಮಾಡುವಂತೆ ಎಸ್​ಐಟಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.