ಮಾಜಿ ಸಚಿವ ಕೃಷ್ಣಯ್ಯಶೆಟ್ಟಿ ವಿರುದ್ಧ ಕೇಸ್

ಬೆಂಗಳೂರು,ಏ.೩-ಮಾಜಿ ಸಚಿವ ಕೃಷ್ಣಯ್ಯಶೆಟ್ಟಿ ವಿರುದ್ಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಗಾಂಧಿನಗರ ಕ್ಷೇತ್ರದ ಹೆಸರು ಮತ್ತು ಕೃಷ್ಣಯ್ಯ ಶೆಟ್ಟಿ ಹೆಸರಲ್ಲಿ ಫುಡ್ ಕಿಟ್ ತಯಾರಿ ಮಾಡಲಾಗುತ್ತಿತ್ತು. ಈ ವೇಳೆ ಖಚಿತ ಮಾಹಿತಿ ಆಧರಿಸಿ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ದಾಳಿ ಮಾಡಿದ್ದಾರೆ.
ಅಷ್ಟೇ ಅಲ್ಲದೇ ಅಕ್ಕಿ, ಬೆಳೆ, ಬೆಲ್ಲ, ಡ್ರೈಫ್ರೂಟ್ಸ್, ಅಡುಗೆ ಎಣ್ಣೆ ಸೇರಿದಂತೆ ಗೃಹ ಬಳಕೆ ದಿನಸಿ ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಸುಮಾರು ಏಳೆಂಟು ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಪತ್ತೆಯಾಗಿತ್ತು.
ಕೃಷ್ಣಯ್ಯ ಶೆಟ್ಟಿ ಅವರು ಗಾಂಧಿನಗರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಚುನಾವಣಾ ಅಧಿಕಾರಿ ಲಕ್ಷ್ಮಣ್ ನೀಡಿದ ದೂರಿನನ್ವಯ ಎಫ್ ಐಆರ್ ದಾಖಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಕೃಷ್ಣಯ್ಯ ಶೆಟ್ಟಿಗೆ ನೊಟೀಸ್ ನೀಡಲು ಪೊಲೀಸರು ಮುಂದಾಗಿದ್ದಾರೆ.