ಮಾಜಿ ಸಚಿವ ಕೃಷ್ಣಪ್ಪ ನಿಧನ

ಬೆಂಗಳೂರು, ಮಾ.೧೯- ಮಾಜಿ ಸಚಿವ ಹಾಗೂ ಮಂಡ್ಯ ಜಿಲ್ಲೆಯ ನಾಗಮಂಗಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹೆಚ್.ಟಿ ಕೃಷ್ಣಪ್ಪ ತಮ್ಮ ಪುತ್ರನ ನಿವಾಸದಲ್ಲಿ ನಿನ್ನೆ ನಿಧನರಾಗಿದ್ದಾರೆ. ಅವರಿಗೆ ೯೧ ವರ್ಷ ವಯಸ್ಸಾಗಿತ್ತು.
ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ. ನಾಗಮಂಗಲ ಸಮೀಪ ಅವರ ತೋಟದಲ್ಲಿ ಇಂದು ಸಂಜೆ ೫ ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ಹೆಚ್.ಟಿ ಕೃಷ್ಣಪ್ಪ ರಾಜಕೀಯಕ್ಕೆ ಪ್ರವೇಶಿಸಿದ್ದರು. ತಾಲ್ಲೂಕಿಗೆ ಹೇಮಾವತಿ ನೀರು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಮಕೃಷ್ಣ ಹೆಗಡೆ ಅವರ ಜನತಾ ಪಕ್ಷದಿಂದ ಸ್ಪರ್ಧಿಸಿ ಹೆಗಡೆ ಅವರ ಸರ್ಕಾರದಲ್ಲಿ ಆರೋಗ್ಯ, ಅಬಕಾರಿ, ವೈದ್ಯಕೀಯ ಶಿಕ್ಷಣ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.