ಮಾಜಿ ಸಚಿವ ಇನಾಮ್‌ದಾರ್ ನಿಧನ

ಬೆಂಗಳೂರು,ಏ.೨೫:ಮಾಜಿ ಸಚಿವ, ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಬಿ. ಇನಾಮ್‌ದಾರ್ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಒಂದು ತಿಂಗಳಿನಿಂದಲೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
೧೯೮೩ ರಲ್ಲಿ ಜನತಾಪಕ್ಷದಿಂದ ಸ್ಪರ್ಧಿಸಿ, ಮೊದಲ ಬಾರಿಗೆ ಕಿತ್ತೂರಿನಿಂದ ಜಯಗಳಿಸಿದ್ದರು. ಬಳಿಕ ೧೯೯೪ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ೯ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ೧೯೮೩-೮೫ರಲ್ಲಿ ಜನತಾ ಪಕ್ಷದಿಂದ, ೧೯೯೪, ೧೯೯೯, ೨೦೧೩ರಲ್ಲಿ ಕಾಂಗ್ರೆಸ್ ಪಕ್ಷದಿಂದ ಇನಾಮ್‌ದಾರ್ ಜಯಗಳಿಸಿದ್ದರು.
೧೯೮೯, ೨೦೦೪, ೨೦೦೮ ಹಾಗೂ ೨೦೧೮ರಲ್ಲಿ ಪರಾಭವಗೊಂಡಿದ್ದರು. ಡಿ. ದೇವರಾಜು ಅರಸು ಹಾಗೂ ಎಸ್. ಬಂಗಾರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಇನಾಮ್‌ದಾರ್ ಕಿತ್ತೂರು ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಅನಾರೋಗ್ಯದ ಕಾರಣದಿಂದಾಗಿ ಬಾಬಾ ಸಾಹೇಬ್ ಪಾಟೀಲ್‌ರವರಿಗೆ ಟಿಕೆಟ್ ನೀಡಿತ್ತು.