ಮಾಜಿ ಸಚಿವ ಆಂಜನೆಯ ಅವರಿಗೆ ಎಮ್.ಎಲ್.ಸಿ ಮಾಡಿ: ರೋಹಿದಾಸ ಘೋಡೆ

Oplus_1179648

ಬೀದರ್: ಮೇ.25:ಮಾಜಿ ಸಚಿವ ಎಚ್.ಆಂಜನೇಯ ಅವರಿಗೆ ವಿಧಾನ ಪರಿಷತ್ ಸದಸ್ಯರಾಗಿ ನೇಮಕ ಮಾಡಬೇಕೆಂದು ಮಾದಿಗ ಸಮಾಜದ ಹಿರಿಯ ಮುಖಂಡರು ಹಾಗೂ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ರೋಹಿದಾಸ್ ಘೋಡೆ ಒತ್ತಾಯಿಸಿದರು.
ಶುಕ್ರವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಳೆದ ಆಡಳಿತ ಸರ್ಕಾರದಲ್ಲಿ ಹೆಚ್.ಆಂಜನೆಯ ಅವರು, ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಜನಪರ ಕಾಳಜಿ, ಪ್ರಜಾಪ್ರಭುತ್ವದ ಹಾದಿಯಲ್ಲಿ ದೀನ ದಲಿತರ ಪರವಾಗಿ ನಡೆಸಿದ ಆಡಳಿತಕ್ಕೆ ಅವರು ಸಾಕ್ಷಿಯಾಗಿದ್ದರು. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿನ ಅವರ ಸೋಲು ರಾಜ್ಯದ ಶೋಷಿತ ವರ್ಗಕ್ಕೆ ಬೇಸರ ತಂದಿದೆ. ಅವರ ಪಕ್ಷ ನಿಷ್ಠೆ ಗುರುತಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಆಂಜನೆಯ ಅವರಿಗೆ ಎಂಎಲ್‍ಸಿ ಮಾಡಬೇಕೆಂದು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶಾಮಣ್ಣ ಬಂಬುಳಗಿ ಮಾತನಾಡಿ, ಮಾಜಿ ಸಚಿವ ಎಚ್. ಆಂಜನೇಯ ಅವರು ನಿಸ್ವಾರ್ಥ, ಸಮಾಜಮುಖಿ, ಸೈದ್ಧಾಂತಿಕ ರಾಜಕಾರಣಿಯಾಗಿದ್ದು, ಪರಿಶಿಷ್ಟ ಸಮುದಾಯಗಳಿಗೆ ಎಸ್ ಸಿಪಿ, ಟಿಎಸ್‍ಪಿ ಕಾಯ್ದೆ ಸಮರ್ಪಕ ಜಾರಿಗೊಳಿಸಿ ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಕಾರಣವಾಗಿರುವ ಅವರಿಗೆ ವಿಧಾನ ಪರಿಷತ್ ಸದಸ್ಯರಾಗಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು.
ಅಖಿಲ ಕರ್ನಾಟಕ ಹೆಚ್.ಆಂಜನೆಯ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷರಾದ ದೇವಿದಾಸ ಚಿಂತಲಗೇರಾ ಮಾತನಾಡಿ, ದಲಿತ ಸಮುದಾಯದ ಧ್ವನಿಯಾಗಿರುವ ನಿಷ್ಠಾವಂತ ರಾಜಕಾರಣಿ, ಹಗಲಿರುಳು ಪಕ್ಷ ಸಂಘಟನೆಯಲ್ಲಿ ತೊಡಗಿರುವ ಮಾಜಿ ಸಚಿವ ಎಚ್.ಆಂಜನೇಯ ಅವರಿಗೆ ಹೆಚ್ಚು ಹೆಚ್ಚು ರಾಜಕೀಯ ಸೇವೆಯಲ್ಲಿ ಸಕ್ರಿಯರಾಗಲು ವಿಧಾನ ಪರಿಷತ್ ಸದಸ್ಯರಾಗಬೇಕಿದೆ ಎಂದು ಹೇಳಿದರು.
ಮಾದಾರ ಚನ್ನಯ್ಯ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ರಮೇಶ ಕಟ್ಟಿತುಗಾಂವ, ಮಾದಿಗ ಸಮಾಜದ ಮುಖಂಡರಾದ ಜಯರಾಜ ವೈದ್ಯ, ದಿಲಿಪ ವರ್ಮಾ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.