ಮಾಜಿ ಸಚಿವ ಅಲೆಕ್ಸಾಂಡರ್ ನಿಧನ: ನಾಳೆ ಅಂತ್ಯಕ್ರಿಯೆ

ಬೆಂಗಳೂರು,ಜ.14 – ಮಾಜಿ ಸಚಿವ, ನಿವೃತ್ತ ಐಎಎಸ್ ಅಧಿಕಾರಿ ಡಾ.ಜೆ. ಅಲೆಗ್ಸಾಂಡರ್ (83) ಇಂದು ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಅಲೆಕ್ಸಾಂಡರ್ ಅವರಿಗೆ ಎರಡು ಮಕ್ಕಳು ಹಾಗೂ 4 ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ ನೆರವೇರಲಿದೆ.

ಮೂಲತಃ ಕೇರಳ ದವರಾದ ಅಲೆಗ್ಸಾಂಡರ್ ಅವರು ಐಎಎಸ್ ಅಧಿಕಾರಿಯಾಗಿ ರಾಜ್ಯ ಪ್ರವೇಶ ಮಾಡಿದ್ದರು. ನಂತರ ರಾಜ್ಯದಲ್ಲಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಆನಂತರ ರಾಜ್ಯ ರಾಜಕಾರಣ ಪ್ರವೇಶ ಮಾಡಿ ಕಾಂಗ್ರೆಸ್‌ನಲ್ಲಿ ಅಂದಿನ ಬೆಂಗಳೂರು ಭಾರತಿನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

ಎಸ್. ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಪ್ರವಾಸೋದ್ಯಮ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಹಿಂದುಳಿದ, ದಲಿತ ಹಾಗೂ ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಸ್ಪಂದಿಸುವ ಅಂದಿನ ಪ್ರಮುಖ ರಾಜಕಾರಣಿಯಾಗಿದ್ದರು.

ಅಲೆಗ್ಸಾಂಡರ್ ಬೆಂಗಳೂರು ಭಾಗದಲ್ಲಿ ದೀನದಲಿತರ ನಾಯಕ ಎಂದು ಹೆಸರು ಪಡೆದಿದ್ದರು. ಇವರು ಮುಖ್ಯಕಾರ್ಯದರ್ಶಿ ಆಗುವ ಮೊದಲೇ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಯಲ್ಲಿ ಕೆಲಸ ಮಾಡಿದ ಏಕೈಕ ಅಧಿಕಾರಿ ಎನ್ನುವ ಖ್ಯಾತಿ ಪಡೆದಿದ್ದರು.

ಸಂತಾಪ:

ಮಾಜಿ ಸಚಿವ ಜೆ. ಅಲೆಕ್ಸಾಂಡರ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.

33 ವರ್ಷಗಳ ಕಾಲ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಅಲೆಕ್ಸಾಂಡರ್ ಅವರು ನಂತರ ರಾಜಕೀಯ ಪ್ರವೇಶಿಸಿ ಜನಸೇವೆಗೆ ತಮ್ಮ ಜೀವನ ಮುಡಿಪಿಟ್ಟಿದ್ದರು ಎಂದು ಸಂತಾಪ ಸೂಚಿಸಿದ್ದಾರೆ

ಪ್ರವಾಸೋದ್ಯಮ ಸಚಿವರಾಗಿ, ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಮಾಡಿದ್ದರು. ಅಲ್ಲದೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿಯೂ ಪಕ್ಷಕ್ಕೆ ಸೇವೆ ಸಲ್ಲಿಸಿದ್ದರು.

ಅಲೆಕ್ಸಾಂಡರ್ ನಿಧನದ ಸುದ್ದಿ ಕೇಳಿ ಬೇಸರವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಕುಟುಂಬ ಸದಸ್ಯರು, ಬಂಧುಗಳು ಹಾಗೂ ಬೆಂಬಲಿಗರಿಗೆ ಆ ಭಗವಂತ ನೀಡಲಿ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.