ಮಾಜಿ ಶಾಸಕ ವಾಸು ನಿಧನ

ಸಂಜೆವಾಣಿ ನ್ಯೂಸ್
ಮೈಸೂರು: ಮಾ.09:- ಚಾಮರಾಜ ಕ್ಷೇತ್ರದ ಮಾಜಿ ಶಾಸಕರಾದ ವಾಸು ಅವರು ಇಂದು ರಂದು ವಿಧಿವಶರಾಗಿದ್ದಾರೆ. ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ.
ಮೇಯರ್ ವಾಸು ಎಂದೇ ಖ್ಯಾತರಾಗಿದ್ದ ಮಾಜಿ ಶಾಸಕ ವಾಸು ಅವರು, 2013ರಲ್ಲಿ ಚಾಮರಾಜ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಶಾಸಕರಾಗಿದ್ದರು. ತಮ್ಮ ಐದು ವರ್ಷಗಳ ಶಾಸಕ ಅವಧಿಯಲ್ಲಿ ವಾಸು ಅವರು ತಮ್ಮ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಮೈಸೂರು ಮಹಾನಗರ ಪಾಲಿಕೆ ಮೇಯರ್ ಆಗಿಯೂ ವಾಸು ಕಾರ್ಯ ನಿರ್ವಹಿಸಿದ್ದರು. 2013ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಚುನಾಯಿತರಾಗಿದ್ದರು. 2018ರಲ್ಲಿ ಬಿಜೆಪಿ ಅಭ್ಯರ್ಥಿ ನಾಗೇಂದ್ರ ವಿರುದ್ಧ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ 2023ರಲ್ಲಿ ಕಾಂಗ್ರೆಸ್‍ನಿಂದ ಟಿಕೆಟ್ ವಂಚಿತರಾಗಿದ್ದರು.
ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿ ಆಗಿದ್ದಾಗ ವಾಸು ಅವರು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಆಗಿ ಕಾರ್ಯ ನಿರ್ವಹಿಸಿದ್ದರು. ಮಹಾರಾಣಿ ಕಾಲೇಜಿನ ನೂತನ ಕಟ್ಟಡ ನಿರ್ಮಾಣ, ಆಸ್ಪತ್ರೆಗಳ ನಿರ್ಮಾಣ, ಜಿಲ್ಲಾಸ್ಪತ್ರೆ ಮಂಜೂರು, ಕುಕ್ಕರಹಳ್ಳಿ ಕೆರೆಯ ಪರಿಸರ ಅಭಿವೃದ್ಧಿ ಹಾಗೂ ನಗರದ ಸಾತಗಳ್ಳಿ ಬಳಿ ವಿದ್ಯಾವಿಕಾಸ ಎಂಜಿನಿಯರಿಂಗ್ ಸಂಸ್ಥೆ ಕಟ್ಟಿ ಬೆಳೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇವರ ಮಗ ಕವೀಶ್ ಗೌಡ ಬಿಜೆಪಿಯಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು.
ಮಾಜಿ ಶಾಸಕರಾದ ವಾಸು ಅವರ ನಿಧನಕ್ಕೆ ಸಂಸದ ಪ್ರತಾಪ್ ಸಿಂಹ ಸಂತಾಪ ಸೂಚಿಸಿದ್ದಾರೆ. ವಾಸು ಅವರ ನಿಧನದ ಸುದ್ದಿ ಕೇಳಿ ಅತ್ಯಂತ ದುಖಃವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.