ಮಾಜಿ ಶಾಸಕ ರಮೇಶ್ ಕುಮಾರ್ ಪಾಂಡೆ ಇನ್ನಿಲ್ಲ

ಬೀದರ್:ಏ.18: ಅನಾರೋಗ್ಯದಿಂದ ಬಳಲುತ್ತಿದ್ದ ಬಿಜೆಪಿಯ ಹಿರಿಯ ಮುಖಂಡ, ಮಾಜಿ ಶಾಸಕ ರಮೇಶ ಕುಮಾರ ಪಾಂಡೆ (90) ಅವರು ಬುಧವಾರ ನಿಧನರಾಗಿದ್ದಾರೆ.

ಬಿಜೆಪಿ ಪಕ್ಷದಲ್ಲಿ ಸಕ್ರೀಯರಾಗಿದ್ದ ಪಾಂಡೆ 1999ರಿಂದ 2003ರವರೆಗೆ ಬೀದರ ಕ್ಷೇತ್ರದ ಶಾಸಕರಾಗಿ ಕೆಲಸ ಮಾಡಿದ್ದರು. ನಂತರ 2013ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲುಂಡಿದ್ದರು.

ಬೀದರ ನಗರಸಭೆ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಜತೆಗೆ ಆರ್‍ಆರ್‍ಕೆ ಸಂಸ್ಥೆಯ ಅಧ್ಯಕ್ಷರಾಗಿ ಶೈಕ್ಷಣಿಕ ಅಭಿವೃದ್ಧಿಗೆ ಕೊಡುಗೆ ನೀಡಿದ್ದರು. ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.

ರಮೇಶಕುಮಾರ ಪಾಂಡೆ ನಿಧನಕ್ಕೆ ಕೇಂದ್ರ ಸಚಿವ ಭಗವಂತ ಖೂಬಾ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಮತ್ತು ಬಿಡಿಎ ಮಾಜಿ ಅಧ್ಯಕ್ಷ ಬಾಬು ವಾಲಿ ಮತ್ತಿತರರು ಸಂತಾಪ ಸೂಚಿಸಿದ್ದಾರೆ.

ಬೀದರನಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ ಕೀರ್ತಿ ಪಾಂಡೆ ಅವರಿಗೆ ಸಲ್ಲುತ್ತದೆ. ಅವರ ನಿಧನಕ್ಕೆ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ಕುಟುಂಬದವರಿಗೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಪಾಂಡೆ ಅವರು ಒಬ್ಬ ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು ಸೇರಿ ಅಪಾರ ಬಂದು ಬಳಗವನ್ನು ಬಿಟ್ಟು ಅಗಲಿದ್ದಾರೆ.