ಮಾಜಿ ಶಾಸಕಿಯ ಧರಣಿ ದೊರೆತ ಮನ್ನಣೆ: ಬಡ ಮಹಿಳೆ ಸೀತಮ್ಮಗೆ ಸಿಕ್ಕಿತು ಹಕ್ಕುಪತ್ರ

ಪುತ್ತೂರು, ಮಾ.೨೭- ಕಳೆದ ಒಂದು ವರ್ಷದಿಂದ ಎರಡುಮುಕ್ಕಾಲು ಸೆಂಟ್ಸ್ ಜಾಗಕ್ಕಾಗಿ ನಿರಂತರ ಇಲಾಖೆಗೆ ಅಲೆದಾಟ ನಡೆಸಿದರೂ ೯೪ ಸಿಸಿ ಹಕ್ಕು ಪತ್ರ ದೊರೆಯದ ಕುರಿತ ಆರೋಪಕ್ಕೆ ಸಂಬಂಧಿಸಿ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಹಕ್ಕು ಪತ್ರ ಕೊಡಿಸುವಂತೆ ಕಂದಾಯ ಇಲಾಖೆಗೆ ನೀಡಿದ ಗಡುವು ದಾಟಿದ ಹಿನ್ನೆಲೆಯಲ್ಲಿ ಶುಕ್ರವಾರ ಪುತ್ತೂರು ಮಿನಿ ವಿಧಾನ ಸೌಧದ ಮೆಟ್ಟಲುಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಧರಣಿ ನಡೆಸಿದರು. ಧರಣಿ ಕುಳಿತ ಒಂದು ತಾಸಿನೊಳಗೆ ಕಂದಾಯ ಇಲಾಖೆ ಬಡ ಮಹಿಳೆ ಸೀತಮ್ಮ ಅವರಿಗೆ ಹಕ್ಕು ಪತ್ರ ಪ್ರತಿಯನ್ನು ನೀಡಿದ ಘಟನೆ ನಡೆದಿದೆ.

ಮಚ್ಚಿಮಲೆಯಲ್ಲಿ ಸೀತಮ್ಮ ಎಂಬವರು ಮನೆ ಮಾಡಿಕೊಂಡು ೭೫ ವರ್ಷಗಳಿಂದ ವಾಸ್ತವ್ಯ ಇದ್ದಾರೆ. ಅವರಿಗೆ ಆಧಾರ್, ಪಡಿತರ ಚೀಟಿ, ವಿದ್ಯುತ್ ಸಂಪರ್ಕ ಎಲ್ಲವೂ ಇದೆ. ಆದರೆ ಅವರಿಗೆ ೯೪ ಸಿಸಿ ಮಾಡಿ ಕೊಡಲು ಯಾಕೆ ನೀವು ಸತಾಯಿಸುತ್ತಿರಿ ಎಂದು ಶಕುತಂಳಾ ಟಿ. ಶೆಟ್ಟಿ ಮಾ. ೮ರಂದು ಪುತ್ತೂರು ಮಿನಿ ವಿಧಾನ ಸೌಧದದಲ್ಲಿ ಕಂದಾಯ ಕಚೇರಿಯಲ್ಲಿ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡಿದ್ದರು. ಇದೇ ವೇಳೆ ಅವರು ಮಾ. ೨೫ರ ಒಳಗೆ ಹಕ್ಕು ಪತ್ರ ಬಡ ಮಹಿಳೆಗೆ ಕೊಡದೇ ಇದ್ದರೆ ಮಿನಿ ವಿಧಾನ ಸೌಧದ ಎದುರು ಧರಣಿ ನಿರತರಾಗುವುದಾಗಿ ಎಚ್ಚರಿಕೆ ನೀಡಿದ್ದರು.

ಮಾ. ೨೫ರ ಸಂಜೆಯವರೆಗೆ ಕಂದಾಯ ಇಲಾಖೆಯಿಂದ ಸೀತಮ್ಮ ಅವರಿಗೆ ಹಕ್ಕು ಪತ್ರ ವಿತರಣೆ ಆಗದ ಹಿನ್ನೆಲೆಯಲ್ಲಿ ಮಾ. ೨೬ರಂದು ಶಕುಂತಳಾ ಶೆಟ್ಟಿಯವರು ಮಿನಿ ವಿಧಾನ ಸೌಧದ ಮೆಟ್ಟಲುಗಳಲ್ಲೇ ಕುಳಿತು ಧರಣಿ ನಿರತರಾದರು. ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ರಮೇಶ್ ಬಾಬು ಅವರು ಹಕ್ಕು ಪತ್ರ ಖಂಡಿತ ಕೊಡಿಸುವುದಾಗಿ ತಿಳಿಸಿದರು. ಆದರೆ ಶಕುಂತಳಾ ಶೆಟ್ಟಿ ಹಕ್ಕು ಪತ್ರ ಕೊಟ್ಟ ಬಳಿಕವೇ ನಾನು ಇಲ್ಲಿಂದ ತೆರಳುವುದಾಗಿ ಪಟ್ಟು ಹಿಡಿದರಲ್ಲದೆ ಸೀತಮ್ಮ ಅವರಿಗೆ ಮಂಜೂರಾದ ೯೪ಸಿಸಿಗೆ ಸರಕಾರಿ ಮೌಲ್ಯ ಕಟ್ಟಲು ಸ್ಥಳದಲ್ಲೇ ಹಣ ಸಂಗ್ರಹ ಮಾಡಿ ಹಕ್ಕು ಪತ್ರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಕೆಪಿಸಿಸಿ ಸದಸ್ಯ ಎಂ.ಬಿ. ವಿಶ್ವನಾಥ ರೈ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣಪ್ರಸಾದ್ ಆಳ್ವ, ರಾಮಚಂದ್ರ ಅಮಳ, ರೋಶನ್ ರೈ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ವಿಶಾಲಾಕ್ಷಿ ಬನ್ನೂರು, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ. ಕೆ.ಬಿ. ರಾಜಾರಾಮ್ ಉಪಸ್ಥಿತರಿದ್ದರು.