ಮಾಜಿ ಶಾಸಕರ ಕೀಳು ಮಟ್ಟದ ಆರೋಪಕ್ಕೆ ಉತ್ತರಿಸಲು ಸಿದ್ಧ: ಬಿಜೆಪಿ

ಪುತ್ತೂರು, ಮೇ ೨೯- ಶಾಸಕ ಸಂಜೀವ ಮಠಂದೂರು ಅವರ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಸಹಿಸದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರು ಶಾಸಕರ ಕುರಿತು ಕೀಳು ಮಟ್ಟದ ಹೇಳಿಕೆಯನ್ನು ನೀಡಿ ಕ್ಷುಲ್ಲಕ ರಾಜಕಾರಣ ನಡೆಸುತ್ತಿದ್ದು, ಅದಕ್ಕೆ ಸಮರ್ಪಕ ಉತ್ತರ ನೀಡಲು ಬಿಜೆಪಿ ಸಿದ್ಧವಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಆರ್.ಸಿ. ನಾರಾಯಣ್ ತಿಳಿಸಿದ್ದಾರೆ.
ಅವರು ಶುಕ್ರವಾರ ಪುತ್ತೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಶಾಸಕಿಯವರು ಶಾಸಕ ಸಂಜೀವ ಮಠಂದೂರು ಅವರನ್ನು ನಾಲಾಯಕ್ ಶಾಸಕ ಎಂದಿರುವುದು ಖಂಡನೀಯ. ನಾಲಾಯಕ್ ಯಾರೆಂದು ಕಳೆದ ೪ ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ ಪುತ್ತೂರಿನ ಮತದಾರರು ಅವರಿಗೆ ತಿಳಿಸಿದ್ದಾರೆ. ಬಳಿಕ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿಯೂ ಬಿಜೆಪಿಯನ್ನು ಅಭೂತಪೂರ್ವವಾಗಿ ಬೆಂಬಲಿಸುವ ಮೂಲಕ ಯಾರು ನಾಲಾಯಕ್ ಎಂದು ಮತದಾರರು ತೋರಿಸಿಕೊಟ್ಟಿದ್ದಾರೆ. ಕೊರೋನಾ ಸಂಕಷ್ಟದ ಸಮಯದಲ್ಲಿ ಮಾಜಿ ಶಾಸಕಿಯವರು ಇಂತಹ ಕೀಳು ಮಟ್ಟದ ರಾಜಕೀಯ ನಡೆಸುವುದು ಸರಿಯಲ್ಲ ಎಂದರು.
ಟೂಲ್‌ಕಿಟ್ ಸಂಸ್ಕೃತಿಯನ್ನು ಕಾಂಗ್ರೆಸ್ ರೂಡಿಸಿಕೊಂಡಿದ್ದು, ಅದರ ಭಾಗವಾಗಿ ಪುತ್ತೂರಿನಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಸಣ್ಣ ಮಟ್ಟಿದ ಟೂಲ್‌ಕಿಟ್ ಪ್ರಯೋಗ ನಡೆಸುತ್ತಿದ್ದಾರೆ. ಇದರಿಂದ ಬಿಜೆಪಿ ಜನಪ್ರಿಯತೆಯನ್ನು ಕುಗ್ಗಿಸಲು ಅವರಿಂದ ಸಾಧ್ಯವಿಲ್ಲ. ಬಿಜೆಪಿ ಪಕ್ಷದಿಂದಲೇ ರಾಜಕಾರಣ ಕಲಿತಿರುವ ಶಕುಂತಳಾ ಶೆಟ್ಟಿ ಅವರು ನಮ್ಮಲ್ಲಿ ಸಾಕಷ್ಟು ತೊಂದರೆ ನೀಡಿ ಬಳಿಕ ಪಕ್ಷ ಬಿಟ್ಟು ಕಾಂಗ್ರೆಸ್‌ಗೆ ಹೋದವರು. ಆದಾಗಲೇ ಪುತ್ತೂರು ಕಾಂಗ್ರೆಸ್‌ನಲ್ಲಿ ೩ ಬಣಗಳಿತ್ತು. ಶಕುಂತಳಾ ಶೆಟ್ಟಿ ಹೋದಮೇಲೆ ಅಲ್ಲಿ ೬ ಬಣಗಳನ್ನು ಮಾಡಿದ್ದಾರೆ. ಅಲ್ಲಿಯೂ ಅವರ ಶನಿಕಾಟ ಮುಂದುವರಿದಿದೆ. ಮಾಜಿ ಶಾಸಕಿಯವರಿಗೆ ವಯೋಸಹಜ ಮರೆವು ಬಂದಿದೆ. ಇದರಿಂದಾಗಿ ಅವರು ರಾಜಕಾರಣ ಬಿಟ್ಟು
ಕುತ್ತಾರಿನ ಮನೆಯಲ್ಲಿ ಕುಳಿತುಕೊಳ್ಳಲಿ ಎಂದು ಹೇಳಿದರು.
ಲೋಪ ಸರಿಪಡಿಸುವ ಕಾರ್ಯ
ಪುತ್ತೂರಿನ ಇಂದಿರಾ ಕ್ಯಾಂಟೀನ್ ಕುರಿತು ಶಾಸಕ ಸಂಜೀವ ಮಠಂದೂರು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡೇ ಪರಿಶೀಲನೆ ನಡೆಸಿ ಅಲ್ಲಿನ ಲೋಪಗಳನ್ನು ಸರಿಪಡಿಸುವ ಕೆಲಸ ಮಾಡಿದ್ದಾರೆ. ಆದರೆ ಓರ್ವ ಮಹಿಳೆಯಾಗಿರುವ ಶಕುಂತಳಾ ಶೆಟ್ಟಿ ಅವರು ಓರ್ವ ತಾಯಿಯಾಗಿ ಅನ್ನದ ಬೆಲೆಯನ್ನು ಅರಿಯಬೇಕಿತ್ತು. ಅದನ್ನು ಅರಿಯದೆ ಬೇಕಾಬಿಟ್ಟಿ ಹೇಳಿಕೆ ನೀಡಿರುವ ಮಾಜಿ ಶಾಸಕಿ ನಿಜವಾಗಿಯೂ ನಾಲಾಯಕ್ ಎಂಬುದನ್ನು ಅವರೇ ತೋರಿಸಿಕೊಟ್ಟಿದ್ದಾರೆ ಎಂದು ನಾರಾಯಣ್ ಆರೋಪಿಸಿದರು.
ತನ್ನ ಶಾಸಕತ್ವದ ಅವಧಿಯಲ್ಲಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ನಡೆಸದೆ ಜನರಿಗೆ ಅನ್ಯಾಯ ಎಸಗಿರುವ ಶಕುಂತಳಾ ಶೆಟ್ಟಿ ಇದೀಗ ಅವರಿಗೆ ಮತ ಹಾಕಿರುವ ಮತದಾರರ ಋಣವನ್ನೂ ತೀರಿಸಿಲ್ಲ. ಕೊರೋನಾ ಸಂಕಷ್ಟದಲ್ಲಿ ಮತದಾರರಿಗೆ ಸಹಾಯ ಮಾಡಿಲ್ಲ. ಕಳೆದ ೩ ವರ್ಷಗಳಿಂದ ಎಲ್ಲಿಯೂ ಕಾಣಿಸಿಕೊಳ್ಳದೆ ಮಂಗಳೂರಿನ ಕುತ್ತಾರಿನಲ್ಲಿರುವ ಮನೆಯಲ್ಲಿ ಕುಳಿತುಕೊಂಡು ಇದೀಗ ಇಲ್ಲಸಲ್ಲದ ಕಾರಣಗಳನ್ನು ಮುಂದಿಟ್ಟು ವಟಗುಟ್ಟುವ ಕೆಲಸ ಮಾಡುತ್ತಿದ್ದಾರೆ. ಜನರ ಬಗ್ಗೆ ಅವರಿಗೆ ಸ್ಪಲ್ಪವಾದರೂ ಕಾಳಜಿಯಿದ್ದಲ್ಲಿ ಜವಾಬ್ದಾರಿಯುತ ಪ್ರತಿಪಕ್ಷದವರಾಗಿ ಕೆಲಸ ಮಾಡಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿಯ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಮಂಜುನಾಥ್, ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಭಟ್, ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾ ಸಮಿತಿ ಸದಸ್ಯ ಉದಯ ಎಚ್., ಹಿಂದುಳಿದ ವರ್ಗಗಳ ನಗರ ಮೋರ್ಚಾ ಅಧ್ಯಕ್ಷ ಶಿವಾನಂದ ಸಪಲ್ಯ ಉಪಸ್ಥಿತರಿದ್ದರು.