
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಆ.11: ಜ್ಞಾನ ಮತ್ತು ಉತ್ತಮ ನಡವಳಿಕೆ ಎಂಥವರನ್ನೂ ಆಕರ್ಷಣೆ ಮಾಡುತ್ತದೆ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ದೇಶದ ಹದಿಮೂರನೇ ರಾಷ್ಟ್ರಪತಿ ಭಾರತ ರತ್ನ ಪ್ರಣಬ್ ಮುಖರ್ಜಿ ಅವರ ನೆನಪು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಮುಖರ್ಜಿ ಅವರು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ನ್ಯಾಯಶಾಸ್ತ್ರ ಅಧ್ಯಯನ ಮಾಡಿ, ಅಧ್ಯಾಪಕ ವೃತ್ತಿ ಆರಂಭಿಸಿ, ತಮ್ಮ ಜ್ಞಾನ ಮತ್ತು ನಡವಳಿಕೆಯಿಂದ ಗುರುತಿಸಲ್ಪಟ್ಟು ಪ್ರಧಾನಿ ಇಂದಿರಾ ಗಾಂಧಿ ಅವರ ಅಪೇಕ್ಷೆಯಂತೆ 1969 ರಲ್ಲಿ ಮೊದಲ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾಗಿ 1981ರ ವರೆಗೆ ನಿರಂತರವಾಗಿ ರಾಜ್ಯಸಭೆಯಲ್ಲಿ ಇದ್ದರು.ವಿತ್ತಖಾತೆಯ ಜೊತೆಗೆ ಹಲವಾರು ಖಾತೆಗಳನ್ನು ನಿರ್ವಹಿದರು.1991ರಿಂದ 1996ರ ವರೆಗೆ ಯೋಜನಾ ಆಯೋಗದ ಮುಖ್ಯಸ್ಥರು ಆಗಿದ್ದರು.2004 ರಿಂದ 2012ರ ವರೆಗೆ ರಕ್ಷಣಾ, ವಿದೇಶಾಂಗ ಹಾಗೂ ವಿತ್ತಸಚಿವರಾಗಿ ಕಾರ್ಯನಿರ್ವಹಿಸಿ,2012 ರಿಂದ 2017 ರವರೆಗೆ ದೇಶದ ಹದಿಮೂರನೇ ರಾಷ್ಟ್ರಪತಿಯಾಗಿ ಆಡಳಿತ ಮಾಡುವುದರೊಂದಿಗೆ 2019ರಲ್ಲಿ ಭಾರತ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತರತ್ನ ಪ್ರಶಸ್ತಿ ಪಡೆದವರು ಎಂದು ಹೇಳಿದರು.ಪ್ರತಿಭಾವಂತ ನಲಿಕಲಿ ಮಕ್ಕಳಾದ ಗಣೇಶ, ಮಂದಾರ,ಸುಮ ಮತ್ತು ಹಿಮಮಣಿ ಗೆ ಬಹುಮಾನ ವಿತರಿಸಲಾಯಿತು.ಶಿಕ್ಷಕರಾದ ದಿಲ್ಷಾದ್ ಬೇಗಂ, ಮೋದಿನ್ ಸಾಬ್, ಸುಮತಿ, ವೈಶಾಲಿ, ಶ್ವೇತಾ, ಉಮ್ಮೆಹಾನಿ, ಶಶಮ್ಮ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಮಹೇಶ ಮುಂತಾದವರು ಉಪಸ್ಥಿತರಿದ್ದರು.