ಮಾಜಿ ಮೇಯರ್​​ ಸಂಪತ್​ ರಾಜ್​ಗೆ ಆಶ್ರಯ ನೀಡಿದ್ದ ಆರೋಪಿ ಸೆರೆ

ಬೆಂಗಳೂರು,ನ.16-ಕೆಜಿಹಳ್ಳಿ‌ಡಿಜೆ‌ಹಳ್ಳಿ ಗಲಭೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಮಾಜಿ ಮೇಯರ್ ಸಂಪತ್ ರಾಜ್ ಮಾಜಿ ಕಾರ್ಪೊರೇಟರ್ ಜಾಕೀರ್​​ಗೆ ಆಶ್ರಯ ನೀಡಿದ್ದ ಆರೋಪಿ ರಿಯಾಜುದ್ದೀನ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಂಪತ್ ರಾಜ್ ಹಾಗೂ ಜಾಕೀರ್​​ ತಲೆಮರೆಸಿಕೊಳ್ಳಲು ನೆರವು ನೀಡಿರುವುದನ್ನು ಆರೋಪಿ ರಿಯಾಜುದ್ದೀನ್ ಒಪ್ಪಿಕೊಂಡಿದ್ದಾನೆ ಎಂದು‌‌ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಆರೋಪಿಯನ್ನು ನಾಗರಹೊಳೆ ಫಾರ್ಮ್ ಹೌಸ್​​​ನಲ್ಲಿ ಬಂಧಿಸಿದ್ದೇವೆ ಆತ ವಿಚಾರಣೆ ವೇಳೆ ನೀಡಿದ ಸುಳಿವು ಆಧರಿಸಿ ತಪ್ಪಿತಸ್ಥರನ್ನು ಶೀಘ್ರದಲ್ಲೇ ದಸ್ತಗಿರಿ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.
ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಸಂಪತ್ ರಾಜ್ ಹಾಗೂ ಜಾಕೀರ್ ಪಾತ್ರವಿರುವುದು ಅತ್ಯಂತ ಸ್ಪಷ್ಟವಾಗಿದೆ. ಆರೋಪಿಗಳ ಬಂಧನಕ್ಕೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದೇವೆ, ವಿಶೇಷ ತಂಡ ರಚಿಸಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದೇವೆ ಎಂದರು.


ಸಂಪತ್ ರಾಜ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದ ಹೈಕೋರ್ಟ್, ಸಂಪತ್ ರಾಜ್​ನನ್ನು ಪತ್ತೆ ಹಚ್ಚಿ ಬಂಧಿಸಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಜರುಗಿಸುವಂತೆ ಪೊಲೀಸರಿಗೆ ನಿರ್ದೇಶಿಸಿತ್ತು. ಅಲ್ಲದೆ ಮುಂದಿನ ವಿಚಾರಣೆ ವೇಳೆ ತನಿಖಾ ಪ್ರಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸೂಚಿಸಿತ್ತು.