ಮಾಜಿ ಮಂಡಲ ಪ್ರಧಾನ ಎಂ. ವಿ. ವೆಂಕಟ್ರಮಣ ಭಟ್‌ರಿಗೆ ಶ್ರದ್ಧಾಂಜಲಿ ಸಭೆ

ಸುಳ್ಯ, ಜ.೬- ಸುಳ್ಯದ ಮಾಜಿ ಮಂಡಲ ಪಂಚಾಯಿತಿ ಸದಸ್ಯರು, ಮಾಜಿ ಮಂಡಲ ಪ್ರಧಾನರಾದ ದಿ.ಎಂ.ವಿ.ವೆಂಕಟರಮಣ ಭಟ್ ನೀರಬಿದಿರೆ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ದುಗಲಡ್ಕ ಸರ್ಕಾರಿ ಪ್ರೌಢ ಶಾಲಾ ಸಭಾಂಗಣದಲ್ಲಿ ನಡೆಯಿತು.
ಮೃತರಿಗೆ ಶ್ರದ್ದಾಂಜಲಿ ಸಲ್ಲಿಸಿ ಮಾತನಾಡಿದ ಬೆಳಾಲು ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಮುಖ್ಯಗುರು ರಾಮಕೃಷ್ಣ ಭಟ್ ಚೊಕ್ಕಾಡಿ ದಿ.ವೆಂಕಟ್ರಮಣ ಭಟ್ ನೀರಬಿದಿರೆ ಯವರು ಉತ್ತಮ ಹಿನ್ನೆಲೆ, ಚರಿತ್ರೆ ಹೊಂದಿರುವ ಸಾಮಾಜಿಕ ಸೇವೆಯಲ್ಲಿ ವಿಸ್ತೃತವಾದ ಅನುಭವ ಮತ್ತು ಕಾಳಜಿ ಹೊಂದಿದ ವ್ಯಕ್ತಿಯಾಗಿದ್ದರು. ಅವರು ಸಾಮಾಜಿಕ ಕೆಲಸಗಳನ್ನು ಪಕ್ಷಬೇಧ ಮರೆತು ಯಾವುದೇ ಸ್ವಹಿತಾಸಕ್ತಿ ಇಲ್ಲದೆ ಮಾಡುತ್ತಿದ್ದರು. ಯಾವುದೇ ಕಳಂಕವಿಲ್ಲದೆ ಪಾರದರ್ಶಕ ವಸ್ತುನಿಷ್ಠ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದರು ಎಂದು ಹೇಳಿದರು.
ವೆಂಕಟ್ರಮಣ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ್, ಸಾಮಾಜಿಕ ಧುರೀಣ ಬೆಟ್ಟ ರಾಜಾರಾಮ್ ಭಟ್, ನಗರ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಭಟ್ ಕೊಡೆಂಕಿರಿ, ಶಶಿಕಲಾ ನೀರಬಿದಿರೆ, ರಿಯಾಜ್ ಕಟ್ಟೆಕ್ಕಾರ್, ನ.ಪಂ ಮಾಜಿ ಅಧ್ಯಕ್ಷೆ ಶೀಲಾವತಿ ಮಾಧವ, ಧ.ಗ್ರಾ.ಯೋಜನೆ ಒಕ್ಕೂಟದ ಅಧ್ಯಕ್ಷ ಯತೀಶ್ ರೈ ದುಗ್ಗಲಡ್ಕ, ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಸುಬ್ರಮಣ್ಯ ಎ ಯು. ನುಡಿನಮನ ಸಲ್ಲಿಸಿದರು. ಸಭೆಯಲ್ಲಿ ಭವಾನಿಶಂಕರ್ ಕಲ್ಮಡ್ಕ, ಗೋವಿಂದ ನಾಯ್ಕ ಕಲ್ಮಡ್ಕ, ಪೊಡಿಯಬ್ಬ ದುಗಲಡ್ಕ, ಗೋಪಾಲಕೃಷ್ಣ ಮಣಿಯಾಣಿ, ಜಯರಾಮ ಗೌಡ, ತಂಗವೇಲು ದುಗಲಡ್ಕ, ನ.ಪಂ ಮಾಜಿ ಸದಸ್ಯರಾದ ಇಬ್ರಾಹಿಂ ನೀರಬಿದಿರೆ, ಶಿವಕುಮಾರ್ ಕಂದಡ್ಕ ಮೊದಲಾದವರು ಉಪಸ್ಥಿತರಿದ್ದರು.