ಮಾಜಿ ಪ್ರಧಾನಿ ಹೆಚ್‌ಡಿಡಿ ಟೆಂಪಲ್ ರನ್

ಬೆಂಗಳೂರು,ಸೆ.೩:ಮಾಜಿ ಪ್ರಧಾನಿ ದೇವೇಗೌಡ ದಂಪತಿಗಳ ದೇವಾಲಯ ಭೇಟಿ ಮುಂದುವರೆದಿದ್ದು, ಇಂದು ಅವರು ಹೊಳೆನರಸೀಪುರದ ಲಕ್ಷ್ಮಿeನಾರ್ಧನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಮಾಜಿ ಮುಖ್ಯಮಂತ್ರಿ ತಮ್ಮ ಪುತ್ರ ಹೆಚ್.ಡಿ. ಕುಮಾರಸ್ವಾಮಿ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೆ ಹಾಗೂ ತಮ್ಮ ಮೊಮ್ಮಗ ಹಾಗೂ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಅನರ್ಹಗೊಳಿಸಿ ರಾಜ್ಯ ಹೈಕೋರ್ಟ್ ತೀರ್ಪು ನೀಡಿದ ನಂತರ ದೇವೇಗೌಡರ ದೇವಾಲಯ ಭೇಟಿ ಮುಂದುವರೆದಿದ್ದು, ನಿನ್ನೆ ತಮ್ಮ ಕುಲದೈವ ಹಾಸನದ ಮಾವಿನ ಕೆರೆಯ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಮಾಜಿ ಪ್ರಧಾನಿ ದೇವೇಗೌಡ ದಂಪತಿಗಳು ಇಂದು ಹಾಸನ ತಾಲ್ಲೂಕಿನ ಬೈಲಹಳ್ಳಿ ಗ್ರಾಮದ ಲಕ್ಷ್ಮಿಜನಾರ್ಧನಸ್ವಾಮಿ ದೇವಾಲಯಕ್ಕೆ ಭೇಟಿ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಸಕ ಎಸ್.ಪಿ ಸ್ವರೂಪ್ ಸಹ ಉಪಸ್ಥಿತರಿದ್ದರು.
ದೇವಾಲಯದಲ್ಲಿ ಅರ್ಚನೆ ಸಂದರ್ಭದಲ್ಲಿ ದೇವೇಗೌಡರು ಅರ್ಚನೆ ಮಾಡುವವರ ಹೆಸರಿನ ದೊಡ್ಡ ಪಟ್ಟಿಯನ್ನೇ ಅರ್ಚಕರಲ್ಲಿ ನೀಡಿ ಇವರೆಲ್ಲರ ಹೆಸರಿನಲ್ಲಿ ಅರ್ಚನೆ ಮಾಡಿಸಿದರು.