ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮದಿನಾಚರಣೆ


ಧಾರವಾಡ, ನ 20: ಭಾರತವನ್ನು ಏಷ್ಯಾದ ಬಲಿಷ್ಠ ರಾಷ್ಟ್ರವನ್ನಾಗಿ ಮಾಡಲು ಅನೇಕ ನಿರ್ಣಯಗಳನ್ನು ತೆಗೆದುಕೊಳ್ಳುವ ದಿಟ್ಟ ನಿರ್ಧಾರ ಮಾಡಿದ್ದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಎಂದು ಕಾಂಗ್ರೆಸ್ ಮುಖಂಡ ದೀಪಕ್ ಚುಂಚೋರೆ ಹೇಳಿದರು.
ನಗರದ ನವಲೂರಿನ ಬಸವೇಶ್ವರ ದೇವಸ್ಥಾನದಲ್ಲಿ ಭಾರತದ ಪ್ರಥಮ ಮಹಿಳಾ ಪ್ರಧಾನಿ, ದಿ. ಇಂದಿರಾ ಗಾಂಧಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತವನ್ನು ಬಲಶಾಲಿ ರಾಷ್ಟ್ರವನ್ನಾಗಿ ಮಾಡಲು ಪಾಕಿಸ್ತಾನದೊಂದಿಗೆ ಸಮರ ಸಾರಿ ಪೂರ್ವ ಪಾಕಿಸ್ತಾನವನ್ನು ಬಾಂಗ್ಲಾದೇಶವನ್ನಾಗಿ ಮಾಡಿ ಭಾರತವನ್ನು ಅಭಿವೃದ್ಧಿಯ ಪಥದಲ್ಲಿ ಸಾಗುವ ಹಾಗೆ ಮಾಡಿದರು ಎಂದರು.
20 ಅಂಶಗಳ ಕಾರ್ಯಕ್ರಮ, ಊಳುವವನೆ ಭೂ ಒಡೆಯ, ಬ್ಯಾಂಕುಗಳ ರಾಷ್ಟ್ರೀಕರಣ ಮತ್ತು ಅನೇಕ ಸಾಮಾನ್ಯ, ಬಡಜನರ ಕಾರ್ಯಕ್ರಮಗಳನ್ನು ಮಾಡಿ ದೇಶದ ಜನಪ್ರಿಯ ಪ್ರಧಾನಿ ಎಂದು ಖ್ಯಾತಿ ಗಳಿಸಿದರು. ಮಹಿಳೆಯರನ್ನು ಸಬಲ ಗೊಳಿಸಿದರೆ ದೇಶವು ಅಭಿವೃದ್ಧಿಯ ಪಥದಲ್ಲಿ ಸಾಗುವುದು ಎಂದು ಅವರ ವಿಚಾರವಾಗಿತ್ತು. ಈ ವಿಚಾರವನ್ನೇ ಇಟ್ಟುಕೊಂಡು ಮಹಿಳಾ ಸಬಲೀಕರಣ ಮಾಡಲು ಅನೇಕ ಕಾರ್ಯಕ್ರಮಗಳನ್ನು ಅವರು ಹಮ್ಮಿಕೊಂಡಿದ್ದರು ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ರವಿಕುಮಾರ್ ಮಾಳಿಗೇರ ಮಾತನಾಡಿ, ಮಹಿಳಾ ಸಬಲೀಕರಣದಿಂದ ದೇಶದ ಆರ್ಥಿಕತೆಗೆ ಸಹಾಯ ಆಗುತ್ತದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ತೆಗೆದುಕೊಂಡ ನಿರ್ಧಾರ ಎಲ್ಲರಿಗೂ ಮಾದರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾವೀರ ಜೈನ್, ದೇವೇಗೌಡ, ವೆಂಕಟೇಶ್ ವೆರ್ಣೇಕರ್ ಹಾಗೂ ಹಲವರು ಭಾಗವಹಿಸಿದ್ದರು.