ಮಾಜಿ ಪಿ.ಎಂ ಸಿಂಗ್‌ಗೆ ಸಚಿವ ಹರ್ಷ ಪ್ರತ್ಯುತ್ತರ


ನವದೆಹಲಿ, ಏ.೧೯-ರಚನಾತ್ಮಕ ಸಹಕಾರ ಮತ್ತು ಅಮೂಲ್ಯವಾದ ಸಲಹೆ ನೀಡಿದರೆ ಅದನ್ನು ಕೇಂದ್ರ ಸರ್ಕಾರ ಪಾಲಿಸಿದೆ ಎನ್ನುವ ಮೂಲಕ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ
ದೇಶದಲ್ಲಿ ಕೊರೊನಾ ಸೋಂಕು ಮತ್ತು ಲಸಿಕೆಯ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ತಪ್ಪು ಮಾಹಿತಿ ನೀಡುತ್ತಿದೆ. ತಪ್ಪು ಮಾಹಿತಿ ನೀಡಿದರೆ ಇತಿಹಾಸ ಎಂದಿಗೂ ಕ್ಷಮಿಸುವುದಿಲ್ಲ ಎಂದು ಅವರು ಹೇಳಿದ್ದಾರೆ
ದೇಶದಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಪ್ರಮಾಣವನ್ನು ಮತ್ತಷ್ಟು ಹೆಚ್ಚು ಮಾಡುವಂತೆ ಒತ್ತಾಯಿಸಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಐದು ಅಂಶಗಳ ಸಲಹೆ ನೀಡಿದ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪತ್ರಕ್ಕೆ ಪ್ರತಿಯಾಗಿ ಪತ್ರ ಬರೆದು ಈ ವಿಷಯ ತಿಳಿಸಿರುವ ಹರ್ಷವರ್ಧನ್ ಅವರು ಕೇಂದ್ರ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಸೇರಿದಂತೆ ಯಾರೊಬ್ಬರೂ ಕನಿಷ್ಠಪಕ್ಷ ಕೊರೋನಾ ಸೋಂಕಿಗೆ ಲಸಿಕೆ ಕಂಡು ಹಿಡಿದ ವಿಜ್ಞಾನಿ ಗಳ ಬಗ್ಗೆ ಮೆಚ್ಚುಗೆಯ ಮಾತನಾಡಿಲ್ಲ. ಅದನ್ನು ಬಿಟ್ಟು ಕೊರೋನಾ ಸೋಂಕು ಮತ್ತು ಲಸಿಕೆಯ ವಿಷಯದಲ್ಲಿ ಜನರಿಗೆ ತಪ್ಪು ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ
ದೇಶದಲ್ಲಿ ಹೆಚ್ಚುತ್ತಿರುವ ಸೋಂಕು ತಡೆಗೆ ಮತ್ತಷ್ಟು ಲಸಿಕೆ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಜೊತೆಗೆ ವಿಶ್ವದಲ್ಲಿ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಮಂದಿಗೆ ಲಸಿಕೆ ಹಾಕಿದ ಮೈಲುಗಲ್ಲು ಕೂಡ ಭಾರತಕ್ಕಿದೆ ಎಂದು ಅವರು ತಿಳಿಸಿದ್ದಾರೆ.
ಸರ್ಕಾರಕ್ಕೆ ನೀವು ನೀಡಿರುವ ಸಲಹೆಗಳು ಸಮರ್ಪಕವಾಗಿಲ್ಲ ನಿಮ್ಮ ಪಕ್ಷದ ಕಿರಿಯ ನಾಯಕರಿಗೆ ಸೋಂಕು ಮತ್ತು ಲಸಿಕೆಯ ವಿಷಯದಲ್ಲಿ ಜನರನ್ನು ತಪ್ಪುದಾರಿಗೆ ಎಳೆಯದಂತೆ ಸಲಹೆ ನೀಡಿ ಎಂದು ಅವರು ಹೇಳಿದ್ದಾರೆ.
ನಿಮ್ಮ ಪಕ್ಷ ಮತ್ತು ನಿಮ್ಮ ಪಕ್ಷದ ಅಧಿಕಾರವಿರುವ ರಾಜ್ಯಗಳಲ್ಲಿ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದು ಕೂಡ ಅವರು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರಕ್ಕೆ ನೀಡಿರುವ ಸಲಹೆಯನ್ನು ನಾವು ಪರಿಗಣಿಸುತ್ತೇವೆ ಅದೇ ರೀತಿ ನೀವು ಕೂಡ ನಿಮ್ಮ ಪಕ್ಷದ ನಾಯಕರಿಗೆ ಸಲಹೆ ನೀಡಿ ತಪ್ಪು ಮಾಹಿತಿ ನೀಡಿದಂತೆ ಮನವಿ ಮಾಡಿದ್ದಾರೆ