ಸಂಜೆವಾಣಿ ವಾರ್ತೆ
ಹೊಸಪೇಟೆ, ಜೂ. 2: ಮಾಜಿ ದೇವದಾಸಿಯರಿಗೆ ಮಾಸಿಕ 5 ಸಾವಿರ ರು. ಮಾಸಾಶನ ನೀಡಬೇಕು. ನಿವೇಶನ ಹಂಚಿಕೆ ಮಾಡಬೇಕು. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ದೇವದಾಸಿಯರ ಸರ್ವೆಯನ್ನು ಖಾಸಗಿ ಸಂಸ್ಥೆಗೆ ಒಪ್ಪಿಸದೇ ಸರ್ಕಾರವೇ ಸರ್ವೆ ನಡೆಸಬೇಕು ಎಂದು ದೇವದಾಸಿ ವಿಮೋಚನಾ ಸಂಘದ ರಾಜ್ಯ ಕಾರ್ಯದರ್ಶಿ ಬಿ. ಮಾಳಮ್ಮ ಆಗ್ರಹಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಖಾಸಗಿ ಸಂಸ್ಥೆಗಳಿಂದ ದೇವದಾಸಿಯರ ಸರ್ವೆ ಮಾಡದೇ ಸರ್ಕಾರದಿಂದ ಮಾಡಿಸಬೇಕು. ಖಾಸಗಿ ಸಂಸ್ಥೆಗಳಿಗೆ ನ್ಯಾಯಸಮ್ಮತವಾಗಿ ಪ್ರತಿ ಮನೆಗಳಿಗೆ ತೆರಳಿ ಸರ್ವೆ ಮಾಡುವುದಿಲ್ಲ. ಇದರ ಬದಲಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ವೆ ಮಾಡುವ ಕೆಲಸವನ್ನು ಒಪ್ಪಿಸಬೇಕು. ಮಾಜಿ ದೇವದಾಸಿಯರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜೂ.12ರಂದು ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಚಳವಳಿ ನಡೆಸಲಾಗುವುದು ಎಂದರು.
ಗಣತಿಯಲ್ಲಿ ಬಿಟ್ಟು ಹೋದ ದೇವದಾಸಿಯರನ್ನು ಈ ಕೂಡಲೇ ಗಣತಿಯಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕು. ದೇವದಾಸಿಯರು ಸಮಾಜದಲ್ಲಿ ಗೌರವಯುತವಾಗಿ ಬದುಕುವುದಕ್ಕೆ ಪ್ರತಿಯೊಬ್ಬರಿಗೆ 5 ಎಕರೆ ಭೂಮಿ ನೀಡಬೇಕು, ನಿವೇಶನ ನೀಡುವುದರ ಜೊತೆಗೆ ಮನೆಯನ್ನು ನಿರ್ಮಿಸಿಕೊಡಬೇಕು. ದೇವದಾಸಿಯರಿಗೆ ವೃತ್ತಿಪರ ತರಬೇತಿ ನೀಡಿ ಸ್ವಯಂ ಉದ್ಯೋಗ ಕಂಡುಕೊಳ್ಳುವುದಕ್ಕೆ ಸಾಲ ಸೌಲಭ್ಯ ಒದಗಿಸಿಕೊಡಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಎಲ್‍ಕೆಜಿ ಮತ್ತು ಯುಕೆಜಿ ಶಿಕ್ಷಣ ನೀಡುವ ಮೂಲಕ ಅಂಗನವಾಡಿ ಕೇಂದ್ರಗಳನು ಮೇಲ್ದರ್ಜೆಗೇರಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿರುವುದು ಸರಿಯಲ್ಲ. ಬಡವರಿಗೆ ಸರ್ಕಾರ ನೆರವು ನೀಡಿದರೆ, ದೇಶ ಆರ್ಥಿಕ ದಿವಾಳಿಯಾಗುವುದಿಲ್ಲ. ಬರೀ ಶ್ರೀಮಂತರ ಪರ ವಹಿಸುವ ಪ್ರಧಾನಿ ಮೋದಿ ಅವರು ಬಡವರ ಪರ ಕೂಡ ಕೆಲಸ ಮಾಡಲಿ. ಬಡವರು, ಮಧ್ಯಮವರ್ಗದವರ ಸಂಕಷ್ಟಕ್ಕೂ ಸ್ಪಂದಿಸಲಿ ಎಂದರು.
ದೇಶದ ಸಂಸತ್ ಭವನ ಉದ್ಘಾಟನೆಗೆ ಪ್ರಧಾನಿ ಮೋದಿ ಅವರು ರಾಷ್ಟ್ರಪತಿಯನ್ನು ಆಹ್ವಾನಿಸಿಲ್ಲ. ಬುಡಕಟ್ಟು ಸಮುದಾಯದ ಮಹಿಳೆ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಮಾಡಿದ್ದೇವೆ ಎಂದು ಪ್ರಚಾರ ಮಾಡಿ, ಕೆಲ ರಾಜ್ಯಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಈಗ ರಾಷ್ಟ್ರಪತಿಯನ್ನೇ ಸಂಸತ್ ಭವನ ಉದ್ಘಾಟನೆಗೆ ಆಹ್ವಾನಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ದಿಲ್ಲಿಯಲ್ಲಿ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಇದುವರೆಗೆ ಆರೋಪಿ ಸ್ಥಾನದಲ್ಲಿರುವ ಸಂಸದ ಬ್ರಿಜ್‍ಭೂಷಣ್ ಸಿಂಗ್ ವಿರುದ್ಧ ಎಫ್‍ಐಆರ್ ದಾಖಲಿಸಿಲ್ಲ, ಕ್ರಮ ಕೂಡ ತೆಗೆದುಕೊಂಡಿಲ್ಲ ಎಂದು ದೂರಿದರು.
ದೇವದಾಸಿಯರ ವಿಮೋಚನಾ ಸಂಘದ ಜಿಲ್ಲಾಧ್ಯಕ್ಷೆ ರೇಣುಕಮ್ಮ, ಜಿಲ್ಲಾ ಕಾರ್ಯದರ್ಶಿ ಕೆ.ನಾಗರತ್ನಮ್ಮ, ತಾಲೂಕು ಅಧ್ಯಕ್ಷೆ ಹಂಪಮ್ಮ, ಎಸ್.ಯಲ್ಲಮ್ಮ ಇತರರು ಪಾಲ್ಗೊಂಡಿದ್ದರು.