ಮಾಜಿ ತಾ.ಪಂ ಸದಸ್ಯನ ಕುಟುಂಬಕ್ಕೆ ಶಾಸಕ ಖಾಶೆಂಪುರ್ ಸಾಂತ್ವನ

ಬೀದರ:ಸೆ.16: ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ಅವರು, ತಾಲೂಕಿನ ಕೋಳಾರ (ಕೆ) ಗ್ರಾಮಕ್ಕೆ ಭೇಟಿ ನೀಡಿ, ಕೆಲ ದಿನಗಳ ಹಿಂದೆ ಕೊರೊನಾದಿಂದ ಮೃತಪಟ್ಟಿದ್ದ ಮಾಜಿ ತಾಲೂಕು ಪಂಚಾಯ್ತಿ ಸದಸ್ಯ ರಾಜಕುಮಾರ್ ಶಂಭುರವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಬಳಿಕ ಮೃತ ರಾಜಕುಮಾರ್ ಶಂಭುರವರ ಮನೆಯಿಂದ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಬಸವೇಶ್ವರ ಸಮುದಾಯ ಭವನದವರೆಗೂ ಗ್ರಾಮಸ್ಥರೊಂದಿಗೆ ನಡೆದು ಬಂದ ಶಾಸಕರು, ಬಸವೇಶ್ವರ ಸಮುದಾಯ ಭವನದ ಆವರಣದಲ್ಲಿ ಗ್ರಾಮಸ್ಥರ ಸಮಸ್ಯೆಗಳನ್ನು ಹಾಲಿಸಿದರು. ಗ್ರಾಮಸ್ಥರು ಗ್ರಾಮದ ಸಮಸ್ಯೆಗಳ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದರು.

ಇದೇ ವೇಳೆ ಮಾತನಾಡಿದ ಶಾಸಕರು, ಗ್ರಾಮಕ್ಕೆ ಕಾರಂಜಾ ಜಲಾಶಯದಿಂದ ಕುಡಿಯುವ ನೀರು ತರುವ ಪ್ರಯತ್ನ ನಡೆಸುತ್ತೇನೆ. ಗ್ರಾಮದ ಸಮಸ್ಯೆಗಳನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಗ್ರಾಮೀಣ ಭಾಗದ ಸಮಸ್ಯೆಗಳನ್ನು ಪರಿಹರಿಸಲು ನಾನು ಬದ್ಧನಾಗಿದ್ದೇನೆ. ಗ್ರಾಮೀಣ ಭಾಗದ ಜನರು ತಮ್ಮ ಗ್ರಾಮಗಳ ಸಮಸ್ಯೆಗಳನ್ನು ನನ್ನ ಗಮನಕ್ಕೆ ತನ್ನಿ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮದ ವಿವಿಧ ಸಂಘಟನೆಗಳ ಮುಖಂಡರು, ಯುವಕರು, ಕಾರ್ಯಕರ್ತರು, ಗ್ರಾಮಸ್ಥರು ಸೇರಿದಂತೆ ಅನೇಕರಿದ್ದರು.