ಮಾಜಿ ಕಮೀಷನರ್ ಎಎಪಿ ಮುಖಂಡ ಭಾಸ್ಕರ್ ರಾವ್ ನಾಳೆ ಬಿಜೆಪಿಗೆ

ಬೆಂಗಳೂರು,ಫೆ.28-ನಗರದ ಮಾಜಿ ಪೊಲೀಸ್ ಆಯುಕ್ತ ಹಾಗೂ ಆಮ್‌ ಆದ್ಮಿ ಪಕ್ಷ(ಎಎಪಿ)ದ ಮುಖಂಡ ಭಾಸ್ಕರ್ ರಾವ್ ಅವರು ನಾಳೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ.
ಕಂದಾಯ ಸಚಿವ ಆರ್‌.ಅಶೋಕ ಅವರನ್ನು ಇಂದು ಭೇಟಿ ಮಾಡಿದ್ದ ಸ್ವಯಂ ನಿವೃತ್ತಿ ಪಡೆದ ಹೆಚ್ಚುವರಿ ಪೊಲೀಸ್ ನಿರ್ದೇಶಕ (ಎಡಿಜಿಪಿ) ಭಾಸ್ಕರ್ ರಾವ್ ಬಳಿಕ ಅವರು ಬಿಜೆಪಿ ಕಚೇರಿಯಲ್ಲಿ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಅಣ್ಣಾಮಲೈ ಸೇರಿ ಹಲವು ನಾಯಕರ ಜತೆ ಮಾತುಕತೆ ನಡೆಸಿದರು.
ತಾವು ಬಿಜೆಪಿ ಸೇರುತ್ತಿರುವುದು ನಿಜ. ನಾಳೆಯೇ ಸೇರ್ಪಡೆಗೊಳ್ಳಲಿದ್ದೇನೆ ಎಂದು ತಿಳಿಸಿದ್ದಾರೆ.
ರಾಜಕೀಯ ಪಕ್ಷ ಸೇರಿ ಚುನಾವಣೆ ಸ್ಪರ್ಧಿಸುವ ಉದ್ದೇಶದಿಂದ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ಸ್ವೀಕಾರಗೊಂಡ ಬಳಿಕ ಅವರು ಆಮ್‌ಆದ್ಮಿ ಪಕ್ಷ ಸೇರಿದ್ದರು. ಬಸವನಗುಡಿಯಿಂದ ಸ್ಪರ್ಧಿಸುವ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಆರಂಭದಲ್ಲಿ ಅವರು ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷವನ್ನು ಟೀಕಿಸುತ್ತಿದ್ದರು ಮತ್ತು ಪಕ್ಷದಲ್ಲೂ ಸಕ್ರಿಯರಾಗಿದ್ದರು.
ಆದರೆ ಕಳೆದ ಒಂದೆರಡು ತಿಂಗಳಿಂದ ಅವರು ಪಕ್ಷದಲ್ಲಿ ಅಷ್ಟಾಗಿ ಸಕ್ರಿಯರಾಗಿರದೇ ತೆರೆಮರೆಯಲ್ಲಿ ಬಿಜೆಪಿ ಸೇರುವ ಪ್ರಯತ್ನ ನಡೆಸಿದ್ದರು.