ಮಾಜಮುಖಿ ಚಿಂತನೆ ಅಗತ್ಯ – ಡಾ.ಎಂ.ಆರ್.ಜಯರಾಮ್

ಕೋಲಾರ,ಮಾ,೨೩- ಉತ್ತಮ ಸಮಾಜ ನಿರ್ಮಾಣಕ್ಕೆ ನಿಮ್ಮ ಜ್ಞಾನ ಉಪಯೋಗವಾಗಲಿ. ಸಮಾಜಮುಖಿಯಾದ ಚಿಂತನೆ ಮಾಡಿ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ||ಎಂ.ಆರ್.ಜಯರಾಮ್ ರವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಬೆಂಗಳೂರಿನ ರಾಮಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದವರು ಕೈವಾರದ ಶ್ರೀ ಯೋಗಿನಾರೇಯಣ ಮಠದಲ್ಲಿ ಆಯೋಜಿಸಿದ್ದ ಸರ್ವೇಕ್ಷಣಾ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಪಠ್ಯದ ಜೊತೆಗೆ ಜನರೊಟ್ಟಿಗೆ ಬೆರೆಯುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಿ. ಸಾಧ್ಯವಾದರೆ ಕೈವಾರದ ಸುತ್ತಮುತ್ತಲಿರುವ ಒಂದೊಂದು ಗ್ರಾಮಗಳಿಗೆ ಭೇಟಿ ನೀಡಿ, ಅಲ್ಲಿನ ಜನರೊಟ್ಟಿಗೆ ಮಾತನಾಡಿ, ಅವರ ಜೀವನಾನುಭವ ಪಡೆಯಿರಿ. ಅದು ನಿಮ್ಮ ಮುಂದಿನ ಬದುಕಿಗೆ ಮಾರ್ಗದರ್ಶನವಾಗಬಹುದು ಎಂದರು.
ಪ್ರಕೃತಿಯನ್ನು ನಾಶಮಾಡದೆ ಅಭಿವೃದ್ಧಿಯೆಡೆಗೆ ಗಮನ ಕೊಡಬೇಕು. ಪ್ರಕೃತಿಯಲ್ಲಿ ವಿಪರೀತವಾಗಿ ಆಗುತ್ತಿರುವ ಬದಲಾವಣೆಗಳನ್ನು ನಾವು ಇಂದು ಕಾಣುತ್ತಿದ್ದೇವೆ. ಭೂಮಿಯ ಸೂಕ್ಷ್ಮವಾದ ತತ್ವವನ್ನು ಅರ್ಥಮಾಡಿಕೊಳ್ಳಬೇಕು. ಪ್ರಕೃತಿಯ ಮೇಲೆ ಮಿತಿಮೀರಿದ ತಂತ್ರಜ್ಞಾನದ ಸವಾರಿ ಅಪಾಯ ತರುತ್ತದೆ. ಮಾನವ ಪ್ರಕೃತಿಯ ಮೇಲೆ ತನ್ನ ಸ್ವಾರ್ಥಕ್ಕಾಗಿ ದಾಳಿ ಮಾಡುತ್ತಾ ಬಂದಿದ್ದಾನೆ. ಪ್ರಕೃತಿಯನ್ನು ನಾಶಪಡಿಸದೆ, ಪ್ರಕೃತಿಯೊಂದಿಗೆ ಬದುಕುವುದು ಹೇಗೆ ಎಂಬುದನ್ನು ಅರಿಯಬೇಕಾಗಿದೆ. ಇದು ಆಧುನಿಕ ತಂತ್ರಜ್ಞಾನ ಯುಗದ ಯುವಜನತೆ ಮುಂದಿರುವ ಸವಾಲು. ಪ್ರಕೃತಿಯೊಂದಿಗೆ ಹೆಜ್ಜೆ ಇಡುವುದನ್ನು ಕಲಿಯಬೇಕಾಗಿದೆ. ಜ್ಞಾನವನ್ನು ಹಂಚಿಕೊಂಡು ಬದುಕಬೇಕು ಎಂದರು.
ಪ್ರಕೃತಿಯ ನಾಶದಿಂದ ಪರಿಸರ ಹಾಳಾಗುವುದಷ್ಟೆ ಅಲ್ಲ ಮಾನವನ ಮಾನಸಿಕ ಸಮತೋಲನ ತಪ್ಪುತ್ತದೆ, ದೌರ್ಬಲ್ಯಗಳು ಬೆಳೆಯುತ್ತದೆ. ಪ್ರಕೃತಿ ನಮಗೆ ಬೇಕಾದಷ್ಟನ್ನು ಕೊಟ್ಟಿದೆ. ಆರೋಗ್ಯಕರವಾದ ಜೀವನವನ್ನು ನಡೆಸಬೇಕಾದರೆ ಪ್ರಕೃತಿಯ ಸಹಾಯ ಬೇಕೇ ಬೇಕು. ಶಾಲಾ ಕಾಲೇಜುಗಳ ಪಠ್ಯದಲ್ಲಿ ಹಸಿರುಕ್ರಾಂತಿಯ ಬಗ್ಗೆ ವಿಶೇಷ ತರಗತಿಗಳನ್ನು ಹಮ್ಮಿಕೊಂಡು ಪರಿಸರ ಜಾಗೃತಿಯನ್ನು ಮೂಡಿಸಬೇಕು ಎಂದರು.
ವಿದ್ಯಾರ್ಥಿಗಳು ತಯಾರಿಸಿರುವ ಯೋಜನೆಯ ನಕ್ಷೆಗಳನ್ನು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ರಾಮಯ್ಯ ತಾಂತ್ರಿಕ ವಿದ್ಯಾಲಯದ ಕಾಲೇಜಿನ ಪ್ರಾಂಶುಪಾಲ ಎನ್.ವಿ.ಆರ್.ನಾಯ್ಡು, ಉಪಪ್ರಾಂಶುಪಾಲರಾದ ದಿಕ್ಷೀತ್, ಸಿವಿಲ್ ವಿಭಾಗದ ಮುಖ್ಯಸ್ಥ ಐ.ವೇಣುಗೋಪಾಲ್, ಪ್ರಾಧ್ಯಾಪಕರಾದ ರಾಘವೇಂದ್ರ ಹಾಗೂ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.