ಮಾಗಳದಲ್ಲಿ ಸಾಮೂಹಿಕ ವಿವಾಹ  : 4 ಜೋಡಿಗಳು ದಾಂಪತ್ಯಕ್ಕೆ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಏ,24-  ತಾಲೂಕಿನ ಮಾಗಳ ಗ್ರಾಮದಲ್ಲಿ ಬಸವೇಶ್ವರ ಜಯಂತಿ ಹಾಗೂ ಗೋಣಿಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹದಲ್ಲಿ ನಾಲ್ಕು ಜೋಡಿಗಳು ದಾಂಪತ್ಯಕ್ಕೆ ಕಾಲಿರಿಸಿದರು.
ಮುಂಡರಗಿಯ ಡಾ.ಅನ್ನದಾನೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಗೋಣಿಬಸವೇಶ್ವರ ಸ್ವಾಮಿ ಜಾತ್ರೆ ಪ್ರಯುಕ್ತ ಗ್ರಾಮದ ಎಲ್ಲ ವರ್ಗದ ಜನರು ಸೇರಿ 42 ವರ್ಷಗಳಿಂದ ನಿರಂತರ ಸಾಮೂಹಿಕ ವಿವಾಹ ಹಮ್ಮಿಕೊಂಡಿರುವುದು ಗ್ರಾಮದ ಹೆಗ್ಗಳಿಕೆ. ಸ್ವಾಮಿಯ ಸನ್ನಿಧಿಯಲ್ಲಿ ಮದುವೆಯಾದ ಜೋಡಿಗಳು ಕಷ್ಟ, ಸುಖಗಳನ್ನು ಸಮನಾಗಿ ಸ್ವೀಕರಿಸಿ ಆದರ್ಶವಾಗಿ ಬಾಳಬೇಕು ಎಂದು ತಿಳಿಸಿದರು.
ಅಂಗೂರು ಹಿರೇಮಠದ ಶಿವಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಎಚ್.ಎಂ.ಬಸವರಾಜಯ್ಯ ಸೇರಿದಂತೆ ದೇವಸ್ಥಾನದ ಸಮಿತಿ ಸದಸ್ಯರು ಹಾಗೂ ಸಾವಿರಾರು ಭಕ್ತರು ಭಾಗವಹಿಸಿದ್ದರು. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 4 ಜೋಡಿ ವಧು ವರರು ನವ ಜೀವನಕ್ಕೆ ಕಾಲಿಟ್ಟರು.
ಇದಕ್ಕೂ ಮುನ್ನ ಬೆಳಿಗ್ಗೆ ಸಕಲ ಮಂಗಳ ವಾದ್ಯಗಳೊಂದಿಗೆ ಪೂರ್ಣಕುಂಭೋತ್ಸವ ಮೆರವಣಿಗೆ ಮಾಡಿ, ತುಂಗಭದ್ರ ನದಿಗೆ ತೆರಳಿ ಆ ಕುಂಭದ ನೀರಿನಿಂದ ಗೋಣಿ ಬಸವೇಶ್ವರ ಸ್ವಾಮಿಗೆ ಅಭಿಷೇಕ ಮಾಡಲಾಯಿತು.