ಮಾಂಸ ಖರೀದಿಗೆ ಮುಗಿಬಿದ್ದ ಜನ

-People are standing que to buy mutton in city

ಬೆಂಗಳೂರು,ಏ.೨೫- ವಾರಾಂತ್ಯ ಕರ್ಫ್ಯೂನ ೨ನೇ ದಿನವಾದ ಇಂದೂ ಅಗತ್ಯ ವಸ್ತುಗಳ ಖರೀದಿಗೆ ಅದರಲ್ಲೂ ಮಾಂಸ ಖರೀದಿಗೆ ಜನರು ಮುಗಿ ಬಿದ್ದಿದ್ದು, ಸಾಮಾಜಿಕ ಅಂತರ ಪಾಲನೆ ಮಾಯಾವಾಗಿತ್ತು.
ಅಗತ್ಯ ವಸ್ತು ಖರೀದಿಗೆ ಬೆಳಿಗ್ಗೆ ೬ ರಿಂದ ೧೦ರವರೆಗೂ ಅವಕಾಶ ಕಲ್ಪಿಸಲಾಗಿತ್ತು. ಮಾರುಕಟ್ಡೆಗಳಲ್ಲಿ ಜನ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮಾಂಸ ಖರೀದಿಗೆ ಮುಗಿ ಬಿದ್ದಿದ್ದು, ಬೆಂಗಳೂರಿನ ಬಹುತೇಕ ಮಾಂಸದಂಗಡಿಗಳ ಮುಂದೆ ಉದ್ದನೆಯ ಸಾಲು ಇತ್ತು. ಇಲ್ಲಿ ಸಾಮಾಜಿಕ ಅಂತರ ಮೂಲೆಗುಂಪಾಗಿದುದು ಕಂಡು ಬಂತು.
ಭಾನುವಾರವಾದ ಕಾರಣ ಜನ ಮಾಂಸ ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದು, ಎಲ್ಲೆಡೆ ರಷ್ ಇತ್ತು. ಉದ್ದನೆಯ ಸಾಲಿನಲ್ಲಿ ನಿಂತು ಮಾಂಸ ಖರೀದಿ ಮಾಡಿದರೆ, ಕೆಲವರು ಸಾಲನ್ನೇ ಮರೆತು ಮಾಂಸ ಖರೀದಿಗೆ ಗುಂಪಾಗಿ ನಿಂತದ್ದು ಕೆಲವೆಡೆ ಕಂಡು ಬಂತು.
ಶಿವಾಜಿ ನಗರ, ಕೆಆರ್ ಮಾರುಕಟ್ಟೆ, ರಸೆಲ್ ಮಾರುಕಟ್ಟೆ, ಶ್ರೀರಾಂಪುರ, ಮಲ್ಲೇಶ್ವರಂ ಮಾರುಕಟ್ಟೆಗಳಲ್ಲೂ ಹೆಚ್ಚಿನ ಜನ ಜಂಗುಳಿ ಇತ್ತು. ಇಲ್ಲೆಲ್ಲ ಜನ ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಕೆಲವೆಡೆ ಬೆಳಿಗ್ಗೆ ೧೦ರ ನಂತರವೂ ಮಾಂಸದ ವ್ಯಾಪಾರ ಮುಂದುವರೆದಿದ್ದು, ಪೊಲೀಸರು ಇಂತಹ ಅಂಗಡಿಗಳನ್ನು ಬಂದ್ ಮಾಡಿಸಿದ್ದರು.
ಬಹುತೇಕ ಮಾಂಸದಂಗಡಿಗಳು ೧೦ರ ನಂತರ ಬಂದ್ ಆದವು. ಕೆಲವರು ಮಾಂಸ ಖರೀದಿ ಸಾಧ್ಯವಾಗದೆ ಗೊಣಗುತ್ತ ತೆರಳಿದ್ದು ಕಂಡು ಬಂತು.