ಮಾಂಸದ ವ್ಯಾಪಾರಿ ಅಡ್ಡಗಟ್ಟಿ ಸುಲಿಗೆ ನಾಲ್ವರು ಸೆರೆ

ಬೆಂಗಳೂರು,ಏ.೧೭-ವ್ಯಾಪಾರಿಗಳನ್ನು ಅಡ್ಡಗಟ್ಟಿ ಲಾಂಗ್ ಮಚ್ಚು ತೋರಿಸಿ ಬೆದರಿಸಿ ಸುಲಿಗೆ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಭಾರತೀನಗರ ಪೊಲೀಸರು ೪ ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ.
ಡಿ.ಜೆ ಹಳ್ಳಿಯ ಜೀವನ್‌ಪಲ್ಲಿಯ ಅಪ್ಸರ್ ಪಾಷಾ(೩೪) ಶಿವಾಜಿನಗರದ ಬಂಬೂ ಬಜಾರ್ ನ ಸೈಯದ್ ತೌಸೀಪ್(೩೨)ಶಿವಾಜಿನಗರದ ಕಾಕ್‌ಬರ್ನ್ ರಸ್ತೆಯ ಮೊಹಮದ್ ಅಲಿ(೩೦) ಕೆ.ಜಿ ಹಳ್ಳಿ ಯ ಅಲಿ ಬಾಯ್ ರೇಷನ್ ಡಿಪೋ ಹತ್ತಿರದ ಮೊಹಮ್ಮದ್ ಅಜರುಲ್ಲಾ( ೩೦) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ ೪ ಲಕ್ಷ ನಗದು ದ್ವಿ ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಅವರು ತಿಳಿಸಿದ್ದಾರೆ. ಕಳೆದ ಜ.೭ ರಂದು ಮುನೀರ್ ಎಂಬಾತ ಡಿ.ಜೆ.ಹಳ್ಳಿ, ಟ್ಯಾನರಿ ರಸ್ತೆ ಮುಂತಾದ ಕಡೆಗಳ ದನದ ಮಾಂಸದ ಅಂಗಡಿಗಳಲ್ಲಿ ಸಂಗ್ರಹಿಸಿದ ೧೬,೬೦ ಲಕ್ಷ ಹಣವನ್ನು ತೆಗೆದುಕೊಂಡು ಸಹೋದರನಾದ ಲತೀಫ್ ಆಟೋದಲ್ಲಿ ಮೆಜೆಸ್ಟಿಕ್‌ಗೆ ಹೋಗುತ್ತಿದ್ದಾಗ ಬಂಧಿತ ಆರೋಪಿಗಳು ಎರಡು ದ್ವಿಚಕ್ರವಾಹನಗಳಲ್ಲಿ ಹಿಂಬಾಲಿಸಿ ಭಾರತಿನಗರದ ಕಾಕ್‌ಬರ್ನ್ ರಸ್ತೆಯಲ್ಲಿ ಅಡ್ಡಗಟ್ಟಿ ಆಟೋ ಚಾಲಕನಿಗೆ ಕಾರದ ಪುಡಿ ಎರಚಿ ಲಾಂಗನ್ನು ತೋರಿಸಿ ಹೆದರಿಸಿ ಮುನೀರ್ ಬಳಿಯಿದ್ದ ಹಣವನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದರು
೧೫೦ ಸಿಸಿಟಿವಿ ಪರಿಶೀಲನೆ:
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಪತ್ತೆಗಾಗಿ ಪುಲಿಕೇಶಿನಗರ ಉಪ ವಿಭಾಗದ ಮಟ್ಟದಲ್ಲಿ ಭಾರತಿನಗರ, ಪುಲಿಕೇಶಿನಗರ, ಕಮರ್ಷಿಯಲ್ ಸ್ಟ್ರೀಟ್ ಹಾಗೂ ಶಿವಾಜಿನಗರ ಪೊಲೀಸ್ ಠಾಣೆಗಳ
ಅಧಿಕಾರಿ ಹಾಗೂ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಗಳ ತಂಡವನ್ನು ರಚಿಸಲಾಗಿತ್ತು. ತಂಡವು ಅಪರಾಧ ನಡೆದ ಸ್ಥಳದ ಸುಮಾರು ಸುಮಾರು ೫-೬ ಕಿ.ಮೀ ಸುತ್ತಳತೆಯಲ್ಲಿನ ಮಾರ್ಗದ ೧೫೦ಕ್ಕೂ ಅಧಿಕ ಸಿಸಿ ಟಿವಿ ಕ್ಯಾಮೇರಾಗಳ ಪೂಟೇಜ್ ಗಳನ್ನು ಸಂಗ್ರಹಿಸಿ ಪರಿಶೀಲಿಸಿ ೩ ತಿಂಗಳುಗಳ ಸತತ ಪ್ರಯತ್ನದಿಂದ ಹಾಗೂ ಆಧುನಿಕ ತಂತ್ರಜ್ಞಾನದ ನೆರವಿನಿಂದ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಹಿಂಬಾಲಿಸಿ ಕೃತ್ಯ:
ಆರೋಪಿ ಅಪ್ಸರ್ ಪಾಷಾ ಮಾಂಸದಂಗಡಿಯಲ್ಲಿ ಕೆಲಸ ಮಾಡುತ್ತಿದ್ದು ಮುನೀರ್ ಪ್ರತಿದಿನ ಹಣ ಸಂಗ್ರಹ ಮಾಡುತ್ತಿದ್ದ ಬಗ್ಗೆ ಮಾಹಿತಿ ಹೊಂದಿದ್ದು ಈ ಬಗ್ಗೆ ಇತರ ಆರೋಪಿಗಳ ಬಳಿ ಚರ್ಚಿಸಿ ಸಂಚು ರೂಪಿಸಿ ಹಿಂಬಾಲಿಸಿ ಕೃತ್ಯ ಎಸಗಿರುವುದು ತನಿಖೆಯಲ್ಲಿ ಕಂಡುಬಂದಿದೆ ಎಂದು ತಿಳಿಸಿದರು.