ಮಾಂಸದ ವ್ಯಾಪಾರಿಗಳಿಗೆ ಥಳಿತ ಪೊಲೀಸರಿಂದ ಮುಖದ ಮೇಲೆ ಮೂತ್ರ

ನವದೆಹಲಿ.ಮಾ೧೭:ಮೂವರು ಪೊಲೀಸರು ಸೇರಿದಂತೆ ೭ ಮಂದಿ, ಇಬ್ಬರು ಮಾಂಸದ ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿ, ಲೂಟಿ ಮಾಡಿರುವ ಘಟನೆ ಪೂರ್ವ ದೆಹಲಿಯ ಆನಂದ್ ವಿಹಾರ್‌ನಲ್ಲಿ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮಾರ್ಚ್ ೭ರಂದು ಈ ಘಟನೆ ನಡೆದಿದ್ದು, ತಡವಾಗಿ ಬಯಲಾಗಿದೆ.ಮಾಂಸ ಮಾರಾಟಗಾರರು ಸಂಚರಿಸುತ್ತಿದ್ದ ಕಾರು ಸ್ಕೂಟರ್‌ವೊಂದಕ್ಕೆ ಡಿಕ್ಕಿ ಹೊಡೆದಿದೆ. ಈ ಸಂದರ್ಭ ಮಾತಿಗೆ ಮಾತು ಬೆಳೆದು ಗಲಭೆ ಸಂಭವಿಸಿದೆ. ಆರೋಪಿಗಳಲ್ಲಿ ಒಬ್ಬ ‘ಗೋ ರಕ್ಷಕ’ನಾಗಿದ್ದು, ಮಾಂಸ ಮಾರಾಟಗಾರರ ಮುಖದ ಮೇಲೆ ಮೂತ್ರ ಮಾಡಿದ್ದಾನೆ. ಅಲ್ಲದೆ, ಅವರನ್ನು ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತರು ಕೂಡಲೇ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಸಹ ೪ ದಿನಗಳ ಬಳಿಕ ಪ್ರಕರಣ ದಾಖಲಾಗಿದೆ.ಮೂವರು ಪೊಲೀಸರು ಸೇರಿ ೭ ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳಲ್ಲಿ ಒಬ್ಬ ಎಎಸ್‌ಐ ಆಗಿದ್ದು, ಆತನನ್ನು ಅಮಾನತು ಮಾಡಲಾಗಿದೆ.
ಮುಸ್ತಾಫಾಬಾದ್‌ನ ನಿವಾಸಿಯಾಗಿರುವ ನವಾಬ್, ಗಾಜಿಪುರಕ್ಕೆ ಮಾಂಸ ಸರಬರಾಜು ಮಾಡುತ್ತಿದ್ದರು. ಸೋದರ ಸಂಬಂಧಿ ಶೋಯಬ್ ಜೊತೆ ಕಾರಿನಲ್ಲಿ ಮಾಂಸ ಇಟ್ಟುಕೊಂಡು ಮನೆಯತ್ತ ತೆರಳುತ್ತಿದ್ದರು. ಈ ಸಂದರ್ಭ, ಕಾರು, ಬೈಕ್‌ಗೆ ಡಿಕ್ಕಿ ಹೊಡೆದಿದೆ. ಸ್ಕೂಟರ್ ಚಾಲಕ ಮಾಂಸದ ವ್ಯಾಪಾರಿಗಳಿಂದ ?೪,೦೦೦ ಅನ್ನು ಡ್ಯಾಮೇಜ್ ಪರಿಹಾರವಾಗಿ ನೀಡುವಂತೆ ಒತ್ತಾಯಿಸಿದ್ದಾನೆ. ಈ ವೇಳೆ, ಸ್ಥಳಕ್ಕಾಗಮಿಸಿದ ಪೊಲೀಸರು ೨,೫೦೦ ಅನ್ನು ಮಾಂಸ ಮಾರಾಟಗಾರರಿಂದ ಪಡೆದು ಸ್ಕೂಟರ್ ಚಾಲಕನಿಗೆ ನೀಡಿದ್ದಾರೆ. ಬಳಿಕ, ಪೊಲೀಸರು ಮಾಂಸದ ವ್ಯಾಪಾರಿಗಳಿಂದ ೧೫ ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದಿದ್ದರೆ ಪೊಲೀಸ್ ಠಾಣೆಗೆ ಕೊಂಡೊಯ್ಯುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ವರದಿ ತಿಳಿಸಿದೆ.
ಇದಕ್ಕೆ ಮಾಂಸದ ವ್ಯಾಪಾರಿಗಳು ನಿರಾಕರಿಸಿದಾಗ , ಇನ್ನೂ ನಾಲ್ವರನ್ನು ಕರೆಸಿಕೊಂಡ ಪೊಲೀಸರು, ಮಾಂಸದ ವ್ಯಾಪಾರಿಗಳನ್ನು ಪೊಲೀಸ್ ವಾಹನದಲ್ಲಿ ಕೂರಿಸಿಕೊಂಡು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಈ ಸಂದರ್ಭ ನವಾಬ್ ಮತ್ತು ಶೋಯಬ್ ಅವರಿಗೆ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಲದೆ, ಆರೋಪಿಯೊಬ್ಬ ಅವರ ಮೇಲೆ ಮೂತ್ರ ಮಾಡಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ವರದಿ ತಿಳಿಸಿದೆ.
ಅಲ್ಲದೆ, ಅವರನ್ನು ಗೋಹತ್ಯೆ ಮಾಡುವವರು ಎಂದು ಆರೋಪಿಸಿರುವ ಪೊಲೀಸರು, ೨೫,೦೦೦ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸಂತ್ರಸ್ತರಿಗೆ ಪ್ರಜ್ಞೆ ತಪ್ಪುವ ಚುಚ್ಚುಮದ್ದುಗಳನ್ನು ಚುಚ್ಚಿ, ಖಾಲಿ ಪತ್ರಗಳಿಗೆ ಸಹಿ ಮಾಡಿಸಿಕೊಳ್ಳಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.ಸಂತ್ರಸ್ತರು ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ದೂರು ದಾಖಲಿಸಿದ್ದಾರೆ.