ಮಾಂಜ್ರಾ ನದಿಗೆ ನೀರು ಹರಿಸಲು ಸಚಿವ ಪ್ರಭು ಚವ್ಹಾಣ್ ಸೂಚನೆ

ಬೀದರ.ಮಾ.27: ಔರಾದ ತಾಲ್ಲೂಕಿನ ಸಂಗಮ, ಹಾಲಹಳ್ಳಿ, ಕಂದಗೂಳ ಹಾಗೂ ಮತ್ತಿತರೆ ಗ್ರಾಮಗಳಲ್ಲಿ ನೀರಿನ ತೀವ್ರ ಸಮಸ್ಯೆಯಿದ್ದು, ಜನ ಮತ್ತು ಜಾನುವಾರುಗಳಿಗೆ ನೀರು ಪೂರೈಸುವಂತಾಗಲು ಕಾರಂಜಾ ಜಲಾಶಯದಿಂದ ಮಾಂಜ್ರಾ ನದಿಗೆ ನೀರು ಹರಿಸುವಂತೆ ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೇಸಿಗೆ ಆರಂಭವಾಗಿದ್ದು, ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಯಾವುದೇ ಗ್ರಾಮಗಳಲ್ಲಿ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಮೋಟಾರ್ ಕೆಟ್ಟು ಹೋಗುವುದು, ವಿದ್ಯುತ್ ಪರಿಕರಗಳ ಹಾನಿಯಂತಹ ಸಣ್ಣಪುಟ್ಟ ಸಮಸ್ಯೆಗಳಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬೇಕು. ನೀರಿನ ಸಂಪನ್ಮೂಲಗಳಿರುವ ಗ್ರಾಮಗಳಲ್ಲಿ ಯಾವುದೇ ಕಾರಣಕ್ಕೂ ನೀರು ಪೂರೈಕೆಯಲ್ಲಿ ವ್ಯತ್ಯೆಯವಾಗಬಾರದು. ನೀರಿನ ಸಂಪನ್ಮೂಲಗಳಿರದ ಕಡೆಗಳಲ್ಲಿ ನೀರು ಪೂರೈಕೆಗೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.