ಮಾಂಜ್ರಾ ನದಿಗೆ ನೀರು ಬಿಡಲು ಸಚಿವ ಪ್ರಭು ಚವ್ಹಾಣ ಸೂಚನೆ

ಬೀದರ:ಮಾ.18:ಔರಾದ ಹಾಗೂ ಕಮಲನಗರ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆಯಾಗುತ್ತಿದ್ದು, ಜನ ಮತ್ತು ಜಾನುವಾರುಗಳಿಗೆ ಸಮರ್ಪಕ ನೀರು ಪೂರೈಸಲು ಕಾರಂಜಾ ಜಲಾಶಯದಿಂದ ಮಾಂಜ್ರಾ ನದಿಗೆ ನೀರು ಬಿಡುಗಡೆ ಮಾಡುವಂತೆ ಪಶು ಸಂಗೋಪನೆ ಸಚಿವರಾದ ಪ್ರಭು.ಬಿ ಚವ್ಹಾಣ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೇಸಿಗೆ ಅವಧಿಯಲ್ಲಿ ಸಹಜವಾಗಿ ನೀರಿನ ಸಮಸ್ಯೆ ಎದುರಾಗುತ್ತದೆ. ಕಾರಂಜಾ ಜಲಾಶಯದಿಂದ ಮಾಂಜ್ರಾ ನದಿಗೆ ನೀರು ಹರಿಸಿದಲ್ಲಿ ನದಿ ವ್ಯಾಪ್ತಿಯಲ್ಲಿ ಬರುವ ಭಾಲ್ಕಿ ತಾಲ್ಲೂಕಿನ ಕೆಲವು ಗ್ರಾಮಗಳು ಸೇರಿದಂತೆ ಔರಾದ(ಬಿ) ಕ್ಷೇತ್ರದ ಸಂಗಮ, ಜಂಬಗಿ, ಬಳತ್, ಠಾಣಾಕುಶನೂರ, ಹೆಡಗಾಪೂರ ಹಾಗೂ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಕಷ್ಟು ಗ್ರಾಮಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ತೀವ್ರ ಸಮಸ್ಯೆಯಿರುವ ಗ್ರಾಮಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಮೋಟಾರ್ ಕೆಡುವುದು, ವಿದ್ಯುತ್ ಪರಿಕರಗಳ ಹಾನಿಯಂಥ ಸಣ್ಣಪುಟ್ಟ ಸಮಸ್ಯೆಗಳಿದ್ದಲ್ಲಿ ತಕ್ಷಣ ಸರಿಪಡಿಸಿ ಎಲ್ಲಿಯೂ ನೀರಿನ ಅಭಾವ ಎದುರಾಗದಂತೆ ಎಚ್ಚರಿಕೆ ವಹಿಸಬೇಕು. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗಬಹುದಾದ ಗ್ರಾಮಗಳ ಪಟ್ಟಿಯನ್ನು ಮುಂಚಿತವಾಗಿಯೇ ಸಿದ್ದಪಡಿಸಿಕೊಂಡು ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದ್ದಾರೆ.