ಮಾಂಗಲ್ಯ ತೆಗೆದು ಪರೀಕ್ಷೆ ಹಾಜರಾಗಲು ಸೂಚನೆ

ಇಟಾವಾ(ಉತ್ತರ ಪ್ರದೇಶ),ಆ.೨೧- ಹಿಜಾಬ್, ಹಲಾಲ್ ಸೇರಿದಂತೆ ಹಲವು ವಿವಾದಗಳು ಈಗಾಗಲೇ ದೇಶದಲ್ಲಿ ಭಾರಿ ಸದ್ದು ಮಾಡುತ್ತಿವೆ. ಇದರ ಬೆನ್ನಲ್ಲೇ ಇದೀಗ ಉತ್ತರ ಪ್ರದೇಶದಲ್ಲಿ ಹೊಸ ವಿವಾದ ಶುರುವಾಗಿದೆ. ಸಿಬಿಎಸ್‌ಇಗೆ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ. ಈ ವೇಳೆ ಯಾವುದೇ ರೀತಿಯ ಆಭರಣಗಳನ್ನು ಧರಿಸಿ ಪರೀಕ್ಷಾ ಕೇಂದ್ರಗಳಿಗೆ ಬರುವುದನ್ನು ಸಿಬಿಎಸ್‌ಇ ನಿಷೇಧಿಸಿದೆ. ಇದು ಮಹಿಳಾ ಅಭ್ಯರ್ಥಿಗಳ ಕುಟುಂಬ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಪರೀಕ್ಷಾ ಕೇಂದ್ರದ ಹೊರಗೆ ಸಂಬಂಧಿಕರು ಗಲಾಟೆ ಮಾಡಿದ್ದಾರೆ. ಉತ್ತರ ಪ್ರದೇಶದ ಇಟಾವಾದಲ್ಲಿ ಸಿಟಿಇಟಿ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಬಂದಿದ್ದ ಮಹಿಳಾ ಅಭ್ಯರ್ಥಿಗಳಿಗೆ ಬಳೆ, ಮಂಗಳ ಸೂತ್ರ ಹಾಗೂ ಕಾಲುಂಗುರ ತೆಗೆಯುವಂತೆ ಸೂಚಿಸಲಾಯಿತು. ಪೋಷಕರು ಪ್ರತಿಭಟಿಸಿದಾಗ, ನಿಯಮಗಳನ್ನು ಪಾಲಿಸುವಂತೆ ಅಥವಾ ಮನೆಗೆ ಹೋಗುವಂತೆ ಸೂಚಿಸಲಾಯಿತು. ಅಲ್ಲದೇ ಪರೀಕ್ಷೆಗೆ ಬಂದಿದ್ದ ಅಭ್ಯರ್ಥಿಗಳ ಬಳಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಹಲವು ಪೋಷಕರು ಆರೋಪಿಸಿದ್ದಾರೆ. ಪರೀಕ್ಷಾ ಕೇಂದ್ರದ ವ್ಯವಸ್ಥೆ ಬಗ್ಗೆ ಪೋಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಗದ್ದಲ ಸೃಷ್ಟಿಸಿದರು. ಈ ವೇಳೆ, ಶಾಲಾ ಆಡಳಿತ ಮಂಡಳಿಯ ಅಧಿಕಾರಿಗಳು ಏನೂ ಮಾತನಾಡದೇ ಮೌನವಾಗಿದ್ದರು ಎನ್ನಲಾಗಿದೆ.
ಕೊನೆಗೆ ಸಿಬ್ಬಂದಿ ಬಲವಂತಕ್ಕೆ ಮಹಿಳೆಯರು ತಮ್ಮ ಮಾಂಗಲ್ಯ ತೆಗೆಯಬೇಕಾಯಿತು. ಈ ವಿಚಾರದಲ್ಲಿ ಸಿಎಂ ಯೋಗಿ ಮಧ್ಯಸ್ಥಿಕೆ ವಹಿಸಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ. ಪರೀಕ್ಷಾ ಕೇಂದ್ರದ ಈ ನಿಯಮ ನಮ್ಮ ಧಾರ್ಮಿಕ ನಂಬಿಕೆಗೆ ಧಕ್ಕೆ ತರಲಿದೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಆಗ್ರಹಿಸಿದ್ದಾರೆ. ಆದರೆ ಈ ಬಗ್ಗೆ ಶಾಲಾ ಆಡಳಿತ ಮಂಡಳಿಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.