ಮಹಿಳೆ ಹತ್ಯೆಗೆ ಬಿಜೆಪಿ ಸಂಚು: ಮಮತಾ ಗುರುತರ ಆರೋಪ

ಕೊಲ್ಕತ್ತಾ, ಮಾ 30-ಮಹಿಳೆಯೊಬ್ಬರ ಕೊಲೆಗೆ ಬಿಜೆಪಿಯಿಂದಲೇ ಸಂಚು ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುತರ ಆರೋಪ ಮಾಡಿದ್ದಾರೆ.
ಗುರುವಾರ ಎರಡನೇ‌ ಹಂತದ ಮತದಾನ ನಡೆಯುತ್ತಿದ್ದು, ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ತನ್ನ ಪಕ್ಷದ ಮಹಿಳೆಯನ್ನೇ ಕೊಲೆ ಮಾಡಲು ಪಿತೂರಿ ನಡೆಸಿ ಆರೋಪವನ್ನು ಬಂಗಾಳದ ಜನರ ಮೇಲೆ ಹೊರಿಸಲು ಯತ್ನಿಸುತ್ತಿದೆ. ಉತ್ತರ ಪ್ರದೇಶ ಹಾಗೂ ಬಿಹಾರದಿಂದ ಕತೆಸಿಕೊಂಡಿರುವ ಗೂಂಡಾಗಳ ಮೂಲಕ ಹತ್ಯೆಗೆ ಸಂಚು ರೂಪಿಸಿದೆ ಎಂದು ಗುಡುಗಿದರು.
ಬಿಜೆಪಿ ಕಾರ್ಯ ಕರ್ತರೊಬ್ಬರ ತಾಯಿಯ ಮೇಲೆ ಇತ್ತೀಚೆಗೆ ಹಲ್ಲೆ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರು ನಿನ್ನೆ ಮೃತಪಟ್ಟಿದ್ದರು. ಮಹಿಳೆಯ ಮೇಲೆ ಟಿಎಂಸಿ ಹಲ್ಲೆ ನಡೆಸಿತ್ತು ಎಂದು ಬಿಜೆಪಿ ಆರೋಪಿಸಿತ್ತು.
ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಕೇಂದ್ರ ಗ್ರಹ ಸಚಿವ ಅಮಿತ್ ಶಾ ಕೂಡ ಟಿಎಂಸಿಯನ್ನು ದೂರಿದ್ದಾರೆ. ಇದರ ಬೆನ್ನಲ್ಲೇ ಮಮತಾ, ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿರುವುದು ಸಂಚಲನಕ್ಕೆ ಕಾರಣವಾಗಿದೆ.