ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಕೊಲೆ ಗುಂಡಿಕ್ಕಿ ಕಾಮುಕನ ಸೆರೆ

ಬೆಂಗಳೂರು,ಆ.೧೮?-ನಗರದ ಹೊರವಲಯದ ಬನ್ನೇರುಘಟ್ಟದ ಬಳಿ ಪೊಲೀಸರ ಪಿಸ್ತೂಲ್ ಮತ್ತೆ ಸದ್ದು ಮಾಡಿದ್ದು,ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಬರ್ಬರವಾಗಿ ಕೊಲೈಗೈದಿದ್ದ ಕಾಮುಕನಿಗೆ ಗುಂಡಿಕ್ಕಿ ಬಂಧಿಸಲಾಗಿದೆ.
ಪೊಲೀಸರ ಗುಂಡು ಕಾಲಿಗೆ ತಗುಲಿ ಗಾಯಗೊಂಡಿರುವ ಬನ್ನೇರುಘಟ್ಟದ ಬ್ಯಾಟರಾಯನದೊಡ್ಡಿಯ ಬಳಿ ಮಹಿಳೆಯ ಮೇಲೆ ಅತ್ಯಾಚಾರ ಕೊಲೆಗೈದು ಪ್ರಕರಣದ ಆರೋಪಿ ಸೋಮ ಅಲಿಯಾಸ್ ಸೋಮಶೇಖರ್ ಗೆ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಬನ್ನೇರುಘಟ್ಟ ಬಳಿಯ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ಇಂದು ಬೆಳಗ್ಗೆ ಅತ್ಯಾಚಾರ ಪ್ರಕರಣದ ಸ್ಥಳ ಮಹಜರಿಗೆ ಆರೋಪಿಯನ್ನು ಕರೆದೊಯ್ಯುವಾಗ ಮೂತ್ರ ವಿಸರ್ಜನೆ ನೆಪದಲ್ಲಿ ಜೀಪ್ ನಿಂದ ಕೆಳಗಿಳಿದ ಸೋಮ ಪರಾರಿಯಾಗಲು ಯತ್ನಿಸಿದಾಗ ಬೆನ್ನಟ್ಟಿದ ಪೇದೆ ಮಾದಪ್ಪ ಮೇಲೆ ಡ್ಯಾಗರ್‌ನಿಂದ ಹಲ್ಲೆ ನಡೆಸಿದ್ದಾನೆ.
ಡ್ಯಾಗರ್ ಎಸೆದು ಶರಣಾಗುವಂತೆ ಜಿಗಣಿ ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ್ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಮತ್ತೆ ಹಲ್ಲೆಗೆ ಮುಂದಾದಾಗ ಮತ್ತೊಂದು ಗುಂಡು ಹಾರಿಸಿದ್ದು ಅದು ಎಡಗಾಲಿಗೆ ತಗುಲಿ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ.
ತಕ್ಷಣವೇ ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗ್ರಾಮಾಂತರ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
ಮೂವರಿಂದ ಗ್ಯಾಂಗ್ ರೇಪ್ :
ಬನ್ನೇರುಘಟ್ಟದ ಬ್ಯಾಟರಾಯನದೊಡ್ಡಿಯ ಮನೆಯಿಂದ ಹೊರಹೋದ ಮುನಿರತ್ನ(೩೮) ಎಂಬ ಮಹಿಳೆಯ ಮೇಲೆ ನಿರ್ಜನ ಪ್ರದೇಶದಲ್ಲಿ ಆರೋಪಿ ಸೋಮ ಸೇರಿ ಮೂವರು ಕಾಮುಕರು ಅತ್ಯಾಚಾರ ಎಸಗಿ ಕೊಲೆ ಮಾಡಿ ಪರಾರಿಯಾಗಿದ್ದರು.
ಮಹಿಳೆ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದ್ದು,ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಕಂಡುಬಂದಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಚಿಸಲಾಗಿದ್ದ ನಾಲ್ಕು ಪೊಲೀಸ್ ತಂಡಗಳು ಕಾರ್ಯಾಚರಣೆಗೆ ಇಳಿದು ಗಾಂಜಾ ಮತ್ತಿನಲ್ಲಿ ಮಹಿಳೆ ಮೇಲೆ ಕಿರಾತಕರು ಅತ್ಯಾಚಾರ ಎಸಗಿ ಕೊಲೆ ಮಾಡಿ ಬಳಿಕ ಕಿರಾತಕರು ಗ್ರಾಮದಲ್ಲಿಯೇ ಇರುವುದನ್ನು ಪತ್ತೆಹಚ್ಚಿದ್ದವು.
ಮೃತ ದೇಹ ಸಿಕ್ಕ ಜಾಗದಲ್ಲಿ ಯಾರಿಗೂ ಸಂಶಯ ಬರದಂತೆ ಓಡಾಡಿಕೊಂಡಿದ್ದ ಆರೋಪಿ ಹರೀಶ್ ಮಾಧ್ಯಮಗಳಿಗೆ ಕೊಲೆಯ ಮಾಹಿತಿಯನ್ನು ನೀಡಿ ಪೋಲೀಸರ ತನಿಖೆಯ ದಿಕ್ಕು ತಪ್ಪಿಸಲು ಮುಂದಾಗಿದ್ದ.
ಮಗುವನ್ನು ಕರೆತಂದಿದ್ದ:
ಮಹಿಳೆಯ ಮಗು ಕಾಣದೆ ಇದ್ದಾಗ ಹುಡುಕಾಟ ನಡೆದ ವೇಳೆ ಆರೋಪಿ ಹರೀಶ್ ಸಹ ಹುಡುಕಾಡುವ ಡ್ರಾಮಾ ಮಾಡಿ ಕೆಲವೇ ನಿಮಿಷದಲ್ಲಿ ಕೊಲೆಯಾದ ಮಹಿಳೆ ಜೊತೆಯಲ್ಲಿದ್ದ ಮಗುವನ್ನು ಕರೆತಂದಿದ್ದ.
ಇದರಿಂದ ಜಾಗೃತರಾದ ಪೊಲೀಸರು ನಿರ್ಜನ ಪ್ರದೇಶದಲ್ಲಿದ್ದ ಮಗುವನ್ನು ಐದೇ ನಿಮಿಷದಲ್ಲಿ ಕರೆತಂದಿದ್ದ ಆರೋಪಿ ಹರೀಶನನ್ನ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದರು.
ಆದರೆ ಆತ ಒಂದಲ್ಲ ಒಂದು ಒಂದೊಂದು ಕಥೆ ಕಟ್ಟುತ್ತಿದ್ದು ಪೊಲೀಸ್ ಭಾಷೆಯಲ್ಲಿ ಕೇಳಿದಾಗ ಗಾಂಜಾ ಹಾಗೂ ಎಣ್ಣೆ ಮತ್ತಿನಲ್ಲಿ ಮೂವರು ಸೇರಿ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದನ್ನು ಬಾಯ್ಬಿಟ್ಟಿದ್ದಾನೆ.
ಆತನ ಜೊತೆ ಇನ್ನಿಬ್ಬರನ್ನು ಬಂಧಿಸಿದ ಜಿಗಣಿ ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಸೋಮನನ್ನು ಮಹಜರು ನಡೆಸಲು ಕರೆತಂದಾಗ ಗುಂಡು ಹಾರಿಸಿದೆ.